Aland | ಬಸವಣ್ಣನವರ ವಿಚಾರಧಾರೆ ಕುರಿತು ಮುಕ್ತ ವಾದ–ಸಂವಾದ ಅಗತ್ಯ: ಶಾಸಕ ಬಿ.ಆರ್.ಪಾಟೀಲ್
ಆಳಂದ: ಸಾಂಸ್ಕೃತಿಕ ನಾಯಕ ಬಸವಣ್ಣನವರ ವಿಚಾರಧಾರೆ ಹಾಗೂ ವಚನ ಸಾಹಿತ್ಯದ ಪ್ರಸ್ತುತತೆ ಕುರಿತು ಸಾಹಿತಿಗಳನ್ನು ಆಹ್ವಾನಿಸಿ ವೇದಿಕೆ ಸಿದ್ಧಪಡಿಸಿ ಉಪನ್ಯಾಸ ನೀಡುವುದಷ್ಟೇ ಸಾಲದು. ಯಾವುದೇ ಪೂರ್ವಾಗ್ರಹವಿಲ್ಲದೆ ಮುಕ್ತವಾಗಿ ವಾದ–ಸಂವಾದಗಳು ನಡೆದಾಗ ಮಾತ್ರ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯ ಎಂದು ಶಾಸಕ ಬಿ.ಆರ್. ಪಾಟೀಲ್ ಅಭಿಪ್ರಾಯಪಟ್ಟರು.
ಪಟ್ಟಣದ ಸಮತಾ ಲೋಕ ಶಿಕ್ಷಣ ಸಮಿತಿಯ ಅಡಿಯಲ್ಲಿ ನಡೆಯುತ್ತಿರುವ ಸಂಬುದ್ಧ ಪದವಿ ಕಾಲೇಜಿನ ಆವರಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಹಾಗೂ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ‘ಬಸವಣ್ಣನವರ ವಿಚಾರಧಾರೆ ಮತ್ತು ವಚನ ಸಾಹಿತ್ಯದ ಪ್ರಸ್ತುತತೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ಬಸವಣ್ಣನವರ ವಿಚಾರಧಾರೆಗಳು ಮತ್ತಷ್ಟು ಪ್ರಸ್ತುತವಾಗಿವೆ. ವಚನಗಳನ್ನು ಅಧ್ಯಯನ ಮಾಡುವುದರ ಜೊತೆಗೆ ಅವುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾನತೆ, ಸೌಹಾರ್ದತೆ ಹಾಗೂ ಮೌಢ್ಯಮುಕ್ತ ಸಮಾಜ ನಿರ್ಮಾಣದ ಆಶಯ ಸಾಕಾರಗೊಳ್ಳಲು ಸಾಧ್ಯ ಎಂದು ಹೇಳಿದರು.
ಕಲಬುರಗಿಯ ನಿವೃತ್ತ ಪ್ರಾಧ್ಯಾಪಕ ಹಾಗೂ ಸಂಪನ್ಮೂಲ ವ್ಯಕ್ತಿ ಡಾ. ಟಿ. ಗುರುಬಸಪ್ಪ ವಿಚಾರಗೋಷ್ಠಿ ನಡೆಸಿಕೊಟ್ಟು ಮಾತನಾಡಿ, ಬಸವಣ್ಣನವರು ಸರ್ವಕಾಲಿಕ ದಾರ್ಶನಿಕ ನಾಯಕರು. ಅವರ ವಚನಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದು, ಮಾನವ ಬದುಕಿನಲ್ಲಿ ಸಮಾನತೆ, ಮಾನವೀಯತೆ ಹಾಗೂ ವೈಚಾರಿಕ ಚಿಂತನೆಗಳ ಮಹತ್ವವನ್ನು ಸಾರುತ್ತವೆ ಎಂದರು.
ಕಾಲೇಜಿನ ಪ್ರಾಚಾರ್ಯ ಸಂಜಯ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಸಂಸ್ಥೆಯ ಸಿಇಒ ವಿ. ರಂಗಸ್ವಾಮಿ ಶೆಟ್ಟಿ, ಅಫಜಲಪುರದ ಪ್ರಾಧ್ಯಾಪಕ ಡಾ. ಶಿವಶರಣಪ್ಪ ಮೋತಕಪಲ್ಲಿ, ಡಾ. ಪ್ರೇಮಿಳಾ ಅಂಬಾರಾಯ, ಡಾ. ಬಸವ ಪಾಟೀಲ್ ಜಾವಳಿ, ಪ್ರಗತಿಪರ ರೈತ ಕಲ್ಯಾಣರಾವ ಪಾಟೀಲ್, ಪ್ರಭಾಕರ ಸಲಗರೆ, ಬಾಬುರಾವ ಮಡ್ಡೆ, ರಮೇಶ ಮಾಡ್ಯಾಳಕರ ಹಾಗೂ ಮಲ್ಲಿನಾಥ ವಚ್ಚೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಚಾರ ಸಂಕಿರಣದಲ್ಲಿ 500ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎ.ವಿ. ಪಾಟೀಲ್ ಪದವಿ ಕಾಲೇಜು ಹಾಗೂ ಮಾದನ ಹಿಪ್ಪರಗಾದ ಶ್ರೀ ಶಿವಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಆಸಕ್ತಿಯಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಇಂದ್ರಮ್ಮ ಗಜೇಂದ್ರಗಡ ಕಾರ್ಯಕ್ರಮ ನಿರೂಪಿಸಿದರು. ರಾಮಣ್ಣ ಸುತಾರ ಸ್ವಾಗತಿಸಿದರು. ಡಾ. ಬಬ್ರುವಾಹನ ವಂದಿಸಿದರು.