Kalaburagi | ಪ್ರತಿ ಟನ್ ಕಬ್ಬಿಗೆ 5,500 ರೂ. ಬೆಲೆ ನಿಗದಿಪಡಿಸಲು ಆಗ್ರಹ
ಎರಡನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ; ವಿವಿಧೆಡೆ ರಸ್ತೆ ತಡೆ
ಕಲಬುರಗಿ: ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ಪ್ರತಿ ಟನ್ ಕಬ್ಬಿಗೆ 5,500 ರೂ. ಬೆಲೆ ನೀಡಬೇಕು ಎಂಬುದು ಸೇರಿದಂತೆ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿತು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಬುಧವಾರ ಬೆಳಗ್ಗೆ ನಗರದ ಹುಮನಾಬಾದ್ ರಿಂಗ್ ರಸ್ತೆಯನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ಇದರಿಂದ ಭಾರಿ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ, ಸುಮಾರು ಎರಡು-ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು.
ಇನ್ನೊಂದೆಡೆ, ನಗರದ ಜೇವರ್ಗಿ ರಸ್ತೆಯ ವಾಲ್ಮೀಕಿ ಮಹರ್ಷಿ ವೃತ್ತದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಯೂ ಬುಧವಾರ ಮುಂದುವರಿಯಿತು. ದಿನವಿಡೀ ವಿವಿಧ ಸಂಘಟನೆಗಳ ಮುಖಂಡರು ಧರಣಿಗೆ ಬೆಂಬಲ ವ್ಯಕ್ತಪಡಿಸಿದರು.
ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು. ಸಕ್ಕರೆಯ ಇಳುವರಿಯನ್ನು ಆಧಾರವಾಗಿಟ್ಟುಕೊಂಡು ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನಿಗದಿಪಡಿಸಬೇಕು. ಕಬ್ಬು ಕಟಾವನ್ನು 12 ತಿಂಗಳೊಳಗೆ ಪೂರ್ಣಗೊಳಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದರು.
ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನಿಂದ ಉತ್ಪಾದನೆಯಾಗುವ ಮೊಲಾಸಸ್, ಕಾಕಂಬಿ, ಎಥನಾಲ್, ಡಿಸ್ಟಿಲರಿ ಉತ್ಪನ್ನಗಳು, ಸಹವಿದ್ಯುತ್, ಬಯೋ ಕಾಂಪೋಸ್ಟ್, ಪಶು ಆಹಾರ ಹಾಗೂ ಬಗಾಸ್ ಸೇರಿದಂತೆ ವಿವಿಧ ಉಪಉತ್ಪನ್ನಗಳಿಂದ ದೊರೆಯುವ ಲಾಭದಲ್ಲಿ ರೈತರಿಗೆ ಶೇ. 50ರಷ್ಟು ಪಾಲು ನೀಡಬೇಕು ಎಂದು ಒತ್ತಾಯಿಸಿದರು.
ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚಕ್ಕೆ ಸಂಬಂಧಿಸಿದಂತೆ ಸಕ್ಕರೆ ಕಾರ್ಖಾನೆಗಳು ಹಾಗೂ ಕಬ್ಬು ಬೆಳೆಗಾರರ ನಡುವೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲು ಸಮಿತಿ ರಚಿಸಬೇಕು. ಈ ಪ್ರಕ್ರಿಯೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಕಬ್ಬು ಖರೀದಿ ಮತ್ತು ಸರಬರಾಜು ನಿಯಂತ್ರಣ ಅಧಿನಿಯಮ, 2013 ಹಾಗೂ ತಿದ್ದುಪಡಿ ಅಧಿನಿಯಮ, 2014ರ ಕಲಂ 4(ಎ)ರಡಿ ಇರುವ ಅವಕಾಶವನ್ನು ಬಳಸಿಕೊಂಡು, ಕೇಂದ್ರ ಸರ್ಕಾರ ನಿಗದಿಪಡಿಸುವ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್ಆರ್ಪಿ) ಜೊತೆಗೆ ರಾಜ್ಯ ಸರ್ಕಾರವೂ ಹೆಚ್ಚುವರಿ ಬೆಲೆ ನಿಗದಿಪಡಿಸಬೇಕು ಎಂದು ರೈತರು ಆಗ್ರಹಿಸಿದರು.
ಕಬ್ಬಿನ ತೂಕದಲ್ಲಿ ನಡೆಯುತ್ತಿರುವ ವಂಚನೆಯನ್ನು ತಡೆಯಲು ಅಳತೆ ಮತ್ತು ತೂಕ ಮಾಪನ ಇಲಾಖೆಯ ಅಧಿಕಾರಿಗಳು ಸಕ್ಕರೆ ಕಾರ್ಖಾನೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಾರ್ಖಾನೆಗಳ ಮುಖ್ಯದ್ವಾರದಲ್ಲಿ ವೇಬ್ರಿಡ್ಜ್ ಅಳವಡಿಸಿ, ಎತ್ತಿನ ಬಂಡಿ, ಟ್ರ್ಯಾಕ್ಟರ್ ಹಾಗೂ ಲಾರಿಗಳಲ್ಲಿ ಸಾಗಿಸುವ ಕಬ್ಬನ್ನು ರೈತರ ಸಮ್ಮುಖದಲ್ಲಿಯೇ ತೂಕ ಮಾಡಬೇಕು. ಸರ್ಕಾರಿ ಎಪಿಎಂಸಿ ಕೇಂದ್ರಗಳಲ್ಲಿಯೂ ವೇಬ್ರಿಡ್ಜ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಹಾಗೂ ಲಾರಿಗಳಿಂದ ಟೋಲ್ಗೇಟ್ಗಳಲ್ಲಿ ಶುಲ್ಕ ವಸೂಲಿ ಮಾಡುವುದನ್ನು ಕೈಬಿಡಬೇಕು. ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರ ಸಮಗ್ರ ನೀತಿ ರೂಪಿಸಿ, ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಅಂದೋಲಾ ಶ್ರೀ ಹಾಗೂ ಪಾಳಾ ಶ್ರೀ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ರೈತ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಸಿದ್ದರಾಮ ದನ್ನೂರ್, ಜಗದೀಶ್ ಪಾಟೀಲ್, ಕರೆಪ್ಪ ಕರಗೊಂಡ, ಸಿದ್ದು ಎಸ್.ಎಲ್., ವೀರಣ್ಣ ಗಂಗಾಣಿ, ಉಮಾಪತಿ ಪಾಟೀಲ್, ರಮೇಶ್ ಹೂಗಾರ್, ಸಿದ್ದು ಕಲಶೆಟ್ಟಿ, ಚೇತನ್ ಪಾಟೀಲ್, ಮಲ್ಲಿಕಾರ್ಜುನ್ ಪಾಟೀಲ್ ಸೇರಿದಂತೆ ಹಲವು ರೈತ ಮುಖಂಡರು ಹಾಗೂ ರೈತರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಯುವತಿ ಗುರುದೇವಿ ಸರಡಗಿ ಅವರು ಬೇಡಿಕೆಗಳು ಈಡೇರುವವರೆಗೆ ಬುಧವಾರ ಬೆಳಗ್ಗೆಯಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಬೇಡಿಕೆ ಈಡೇರದಿದ್ದರೆ ಧರಣಿ ಮುಂದುವರಿಕೆ :
ಸಕ್ಕರೆಗೆ ಪ್ರತಿ ಕೆ.ಜಿ.ಗೆ 60 ರೂ. ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನಿಗದಿಪಡಿಸಬೇಕು. ರಾಜ್ಯ ಸರ್ಕಾರವು ರಾಜ್ಯ ಸಲಹಾ ಬೆಲೆ (ಎಸ್ಎಪಿ) ಮೂಲಕ ಪ್ರತಿ ಟನ್ ಕಬ್ಬಿಗೆ 1,000 ರೂ. ಪ್ರೋತ್ಸಾಹಧನ ನೀಡಬೇಕು. ರೈತರ ಎಲ್ಲ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು. ಇಲ್ಲದಿದ್ದರೆ ಧರಣಿಯನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿದ್ದು ಎಸ್.ಎಲ್. ಎಚ್ಚರಿಕೆ ನೀಡಿದರು.