ಚಿತ್ತಾಪುರ: ಚಿತ್ತಾಪುರ ಗ್ರೇಡ್‌-1 ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರನ್ನು ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಕಿರಿಯ ಶ್ರೇಣಿ ವೃಂದಕ್ಕೆ ತಾತ್ಕಾಲಿಕವಾಗಿ ಉನ್ನತೀಕರಿಸಿ, ಅದೇ ಸ್ಥಾನದಲ್ಲಿ ಮುಂದುವರಿಸಿ ಸರ್ಕಾರ ಆದೇಶ ಹೊರಡಿಸಿದೆ. ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವ ಆದೇಶದಂತೆ, ಅವರ ಸೇವಾ ಹಿರಿತನ ಹಾಗೂ ದಕ್ಷತೆಯನ್ನು ಪರಿಗಣಿಸಿ ಈ ಬಡ್ತಿ ನೀಡಲಾಗಿದೆ.

ನಾಗಯ್ಯ ಹಿರೇಮಠ ಅವರು ಕಳೆದ ಎರಡು ವರ್ಷಗಳಿಂದ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ವಿವಿಧ ಸೌಲಭ್ಯಗಳಾದ ಪಹಣಿ, ಪಿಂಚಣಿ, ವಸತಿ ಯೋಜನೆಗಳು ಹಾಗೂ ಬೆಳೆ ಪರಿಹಾರಗಳು ನೈಜ ಫಲಾನುಭವಿಗಳಿಗೆ ತಲುಪುವಂತೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ.

ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ, ಅಕ್ರಮ ಭೂ ಕಬಳಿಕೆ ಹಾಗೂ ಸರ್ಕಾರಿ ಜಮೀನು ಒತ್ತುವರಿ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ನಿರಂತರವಾಗಿ ಶ್ರಮಿಸಿದ್ದಾರೆ. ಕಂದಾಯ ಅದಾಲತ್, ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಹಾಗೂ ಪೌತಿ ಖಾತೆ ಅಭಿಯಾನದಂತಹ ಕಾರ್ಯಕ್ರಮಗಳನ್ನು ಜನರ ಮನೆಬಾಗಿಲಿಗೆ ಕೊಂಡೊಯ್ದಿದ್ದಾರೆ.

ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆಗೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor