ಸೇಡಂ: ತಾಲೂಕಿನ ನಾಚವಾರ ಗ್ರಾಮದಲ್ಲಿ ಕಳೆದ ಆರು ತಿಂಗಳಿನಿಂದ ಒಳಚರಂಡಿ ನೀರು ರಸ್ತೆಯ ಮೇಲೆ ಹರಿದು ಸಾರ್ವಜನಿಕರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದ ಸಮಸ್ಯೆಯ ಕುರಿತು ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ವರದಿಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ. ವರದಿಯಿಂದ ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ತಾಲೂಕಿನ ಮೂದೋಳ ವ್ಯಾಪ್ತಿಯ ದುಗನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನಾಚವಾರ ಗ್ರಾಮದಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದ್ದರಿಂದ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿತ್ತು. ಇದರಿಂದ ಗ್ರಾಮದಲ್ಲಿ ದುರ್ವಾಸನೆ ಹರಡುವುದರ ಜತೆಗೆ ಸಾಂಕ್ರಾಮಿಕ ರೋಗಗಳು ಹರಡುವ ಆತಂಕವೂ ಗ್ರಾಮಸ್ಥರಲ್ಲಿ ಮನೆಮಾಡಿತ್ತು. ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಸಮಸ್ಯೆಯನ್ನು ಪರಿಹರಿಸುವಂತೆ ಗ್ರಾಮಸ್ಥರು ಹಲವು ಬಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಕುರಿತು ವಾರ್ತಾಭಾರತಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಮೂಲಕ ಒಳಚರಂಡಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಇದರಿಂದ ರಸ್ತೆಯ ಮೇಲೆ ಕೊಳಚೆ ನೀರು ಹರಿಯದಂತೆ ಕ್ರಮ ಕೈಗೊಳ್ಳಲಾಗಿದ್ದು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor