ಜೇವರ್ಗಿ: ಜೇವರ್ಗಿ ಮತ್ತು ಯಡ್ರಾಮಿ ತಾಲೂಕುಗಳ ವ್ಯಾಪ್ತಿಯ ಏಳು ಜಿಲ್ಲಾ ಪಂಚಾಯಿತಿ ಹಾಗೂ 27 ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಅಧಿಕಾರ ವಂಚಿತ ಸಮುದಾಯಗಳಿಗೆ ಆದ್ಯತೆ ನೀಡಿ ಟಿಕೆಟ್ ನೀಡಲು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ನಿರ್ಧರಿಸಿದೆ ಎಂದು ಪಕ್ಷದ ಜೇವರ್ಗಿ ತಾಲೂಕು ಅಧ್ಯಕ್ಷ ಪರಶುರಾಮ ಎಸ್. ನಡಗಟ್ಟಿ ತಿಳಿಸಿದ್ದಾರೆ.

ಡಿಸೆಂಬರ್‌ನಲ್ಲಿ ನಡೆಯಲಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಜೇವರ್ಗಿ–ಯಡ್ರಾಮಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ ಏಳು ಜಿಲ್ಲಾ ಪಂಚಾಯಿತಿ ಹಾಗೂ 27 ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಬಿಎಸ್‌ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಟಿಕೆಟ್ ವಂಚಿತರಾಗಿ ರಾಜಕೀಯ ಅಧಿಕಾರದಿಂದ ದೂರ ಉಳಿದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲೆಮಾರಿ ಸಮುದಾಯಗಳು, ಕಾರ್ಮಿಕರು, ಅಲ್ಪಸಂಖ್ಯಾತರು ಹಾಗೂ ಬಡ ಸಮುದಾಯಗಳ ನಿಷ್ಠಾವಂತ ಕಾರ್ಯಕರ್ತರಿಗೆ ಈ ಬಾರಿ ಆದ್ಯತೆಯ ಮೇರೆಗೆ ಟಿಕೆಟ್ ನೀಡಲಾಗುವುದು ಎಂದು ಹೇಳಿದ್ದಾರೆ.

ಹಣವಂತರಿಗೆ ಮಾತ್ರ ಟಿಕೆಟ್ ನೀಡುವ ಪದ್ಧತಿಗೆ ಬಿಎಸ್‌ಪಿಯಲ್ಲಿ ಅವಕಾಶವಿಲ್ಲ. ಸಂವಿಧಾನದ ಆಶಯದಂತೆ ದುಡಿಯುವ ವರ್ಗದ ಜನರಿಗೂ ರಾಜಕೀಯ ಅಧಿಕಾರ ದೊರೆಯಬೇಕು ಎಂಬುದೇ ಪಕ್ಷದ ಮೂಲ ಉದ್ದೇಶವಾಗಿದೆ ಎಂದು ಪರಶುರಾಮ ಎಸ್. ನಡಗಟ್ಟಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor