×
Ad

ಆಳಂದ | ಪ್ರತಿಯೊಂದು ಜೀವವೂ ಅಮೂಲ್ಯ: ಶ್ರೀನಿವಾಸ ಬೋಸಗೆ

ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ

Update: 2026-01-13 18:33 IST

ಆಳಂದ: "ಪ್ರತಿಯೊಂದು ಜೀವವೂ ಅಮೂಲ್ಯವಾಗಿದ್ದು, ಜೀವ ರಕ್ಷಣೆ ಹಾಗೂ ರಸ್ತೆ ಸುರಕ್ಷತೆಗಾಗಿ ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು," ಎಂದು ಹಿರಿಯ ನ್ಯಾಯವಾದಿ ಶ್ರೀನಿವಾಸ ಬೋಸಗೆ ಸಲಹೆ ನೀಡಿದರು.

ಮಂಗಳವಾರ ಪಟ್ಟಣದ ಮಾತೋಶ್ರೀ ಅಂಬವ್ವಾ ರುಕ್ಮಯ್ಯ ಗುತ್ತೇದಾರ ಸ್ಮಾರಕ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಕಾರ್ಯಕ್ರಮವನ್ನು ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಶಿಕ್ಷಣ, ಪೊಲೀಸ್ ಇಲಾಖೆ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ವಾಹನಗಳ ಸಂಖ್ಯೆ ಹೆಚ್ಚಾದಂತೆ ಅಪಘಾತಗಳೂ ಹೆಚ್ಚುತ್ತಿವೆ. ಸಂಚಾರಿ ನಿಯಮಗಳ ಅರಿವಿದ್ದರೂ ಪಾಲನೆಯಲ್ಲಿ ನಿರ್ಲಕ್ಷ್ಯ ವಹಿಸುವುದೇ ಇದಕ್ಕೆ ಪ್ರಮುಖ ಕಾರಣ. ಅಪಘಾತದಿಂದ ಒಂದು ಕುಟುಂಬವೇ ಬೀದಿಗೆ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಾಹನ ಚಾಲನೆ ಮಾಡುವಾಗ ಪ್ರತಿಯೊಬ್ಬರೂ ತಾಳ್ಮೆ ಹಾಗೂ ಎಚ್ಚರಿಕೆ ವಹಿಸಬೇಕು. ಚಾಲನಾ ಪರವಾನಗಿ, ವಿಮಾ ಪಾಲಿಸಿ, ವಾಹನ ನೋಂದಣಿ ಪತ್ರ ಹಾಗೂ ವಾಯುಮಾಲಿನ್ಯ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ದ್ವಿಚಕ್ರ ಸವಾರರು ಹೆಲ್ಮೆಟ್ ಹಾಗೂ ಕಾರು ಚಾಲಕರು ಸೀಟ್ ಬೆಲ್ಟ್ ಧರಿಸುವುದು ಅವಶ್ಯಕ ಎಂದು ಬೋಸಗೆ ತಿಳಿಸಿದರು.

ಶಿಕ್ಷಣ ಇಲಾಖೆಯ ಬಿಆರ್‌ಪಿ ಈಶ್ವರಿ ಚಿಕ್ಕಮಠ ಮಾತನಾಡಿ, ಅಪಘಾತಗಳನ್ನು ತಡೆಯಲು ಸಾರಿಗೆ ಇಲಾಖೆಯು ಪ್ರತಿವರ್ಷ ಜನವರಿ ತಿಂಗಳಲ್ಲಿ ಶಾಲೆ, ಸಂತೆ ಹಾಗೂ ಬಸ್ ನಿಲ್ದಾಣದಂತಹ ಜನಸಂದಣಿ ಇರುವ ಪ್ರದೇಶಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ. ಅಪ್ಪಾಸಾಬ ಬಿರಾದಾರ ಮಾತನಾಡಿ, ಹಿಂದೆ ಮನೆಗೊಂದು ಸೈಕಲ್ ಇರುತ್ತಿತ್ತು. ಆದರೆ ಇಂದು ಮನೆಯಲ್ಲಿ 2-3 ಸ್ಕೂಟರ್ ಅಥವಾ ಕಾರುಗಳನ್ನು ಹೊಂದಿರುವುದು ಸಾಮಾಜಿಕ ಪ್ರತಿಷ್ಠೆಯಾಗಿದೆ. ವಾಹನಗಳ ಸಂಖ್ಯೆ ಮಿತಿಮೀರುತ್ತಿರುವುದರಿಂದ ಅಪಘಾತಗಳ ಪ್ರಮಾಣವೂ ಹೆಚ್ಚುತ್ತಿರುವುದು ಕಳವಳಕಾರಿ ಎಂದು ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News