ಪಕ್ಷ ಆದೇಶಿಸಿದರೆ ಬಿ.ಆರ್ ಪಾಟೀಲರು ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲು ಸಿದ್ಧರಿದ್ದಾರೆ: ಕಾಂಗ್ರೆಸ್ ಮುಖಂಡರು
ಕಲಬುರಗಿ: "ಕಾಂಗ್ರೆಸ್ ಪಕ್ಷ ಆದೇಶಿಸಿದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಈಗಲೂ ಮತ್ತೊಮ್ಮೆ ಚುನಾವಣೆ ಎದುರಿಸಲು ಶಾಸಕ ಬಿ ಆರ್ ಪಾಟೀಲ್ ಅವರು ಸಿದ್ಧರಿದ್ದಾರೆ" ಎಂದು ಕಾಂಗ್ರೆಸ್ ಮುಖಂಡರಾದ ಅಶೋಕ್ ಸಾವಳೇಶ್ವರ, ಸಿದ್ಧರಾಮ ಪ್ಯಾಟಿ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತಗಳ್ಳತನ ನಡೆದಿದ್ದರೆ, ಬಿ.ಆರ್.ಪಾಟೀಲ ಹೇಗೆ ಗೆಲ್ಲುತ್ತಿದ್ದರು, ನಾನು ಗೆಲ್ಲುತ್ತಿದ್ದೆ ಎಂದು ಸುಭಾಷ್ ಗುತ್ತೇದಾರ ಹೇಳಿದ್ದಾರೆ. ಅವರ ಕಡೆಯಿಂದ ಮಾಡುತ್ತಿದ್ದ ಮತಗಳ್ಳತನ ಯತ್ನವನ್ನು ತಡೆಗಟ್ಟಿದ್ದರಿಂದಲೇ ಬಿ.ಆರ್.ಪಾಟೀಲರ ಗೆಲುವು ಸಾಧ್ಯವಾಗಿದೆ ಎಂದು ಹೇಳಿದರು.
ಎಸ್‌ಐಟಿ ತನಿಖೆಗೆ ಸಹಕರಿಸುವುದಾಗಿ ಹೇಳಿದ್ದ ಸುಭಾಷ ಗುತ್ತೇದಾರ, ಆಳಂದದ ಮನೆಯಿಂದ ಚುನಾವಣೆಗೆ ಸಂಬಂಧಿಸಿದ ದಾಖಲೆ, ಕಾಗದ ಪತ್ರಗಳನ್ನು ತನಿಖಾ ವೇಳೆಯಲ್ಲೇ ಸುಟ್ಟಿದ್ದು ಏಕೆ? ಅವರ ಮಕ್ಕಳಾದ ಹರ್ಷಾನಂದ ಗುತ್ತೇದಾರ್ ಹಾಗೂ ಸಂತೋಷ್ ಗುತ್ತೇದಾರ್ ಎಲ್ಲಿದ್ದಾರೆ?’ ಎಂದು ಪ್ರಶ್ನಿಸಿದರು.
ಆಳಂದ ಶಾಸಕ ಬಿ.ಆರ್.ಪಾಟೀಲ ಹಾಗೂ ಅವರ ಅಣ್ಣನ ಮಗ ಆರ್.ಕೆ.ಪಾಟೀಲರು ಮಹಾಂತಪ್ಪ ಆಲೂರೆ ಎಂಬವರ ಕೊಲೆ ಮಾಡಿದ್ದಾರೆ ಎಂಬ ಬಿಜೆಪಿ ಮುಖಂಡ ಸುಭಾಷ ಗುತ್ತೇದಾರ ಆರೋಪ ಸತ್ಯಕ್ಕೆ ದೂರ ಎಂದು ಅಶೋಕ ಸಾವಳೇಶ್ವರ ಹೇಳಿದರು.
ಕೊಲೆಯಲ್ಲಿ ಬಿ.ಆರ್.ಪಾಟೀಲರು, ಆರ್.ಕೆ.ಪಾಟೀಲರ ಕೈವಾಡ ಇರುವ ಬಗ್ಗೆ ಆಲೂರೆ ಕುಟುಂಬದವರು ದೂರು ಕೊಟ್ಟಿದ್ದಾರಾ? 2024ರಲ್ಲೇ ಈ ಪ್ರಕರಣ ನಡೆದರೂ, ಇಷ್ಟು ದಿನ ಬಾಯಿ ಮುಚ್ಚಿ ಕುಳಿತಿದ್ದೇಕೆ? ಎಸ್‌ಐಟಿ ದಾಳಿ ಬಳಿಕ ಗುತ್ತೇದಾರ ಈ ವಿಷಯ ಪ್ರಸ್ತಾಪಿಸಲು ಕಾರಣವಾದರೂ ಎಂದು ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗುರುಶಾಂತ ಪಾಟೀಲ ನಿಂಬಾಳ, ರಾಜಶೇಖರ ಪಾಟೀಲ, ಸಲಾಮ ಸಗರಿ, ಶರಣಬಸಪ್ಪ ಭೂಸನೂರ, ಮೋಹನಗೌಡ ಪಾಟೀಲ, ಸತೀಶ, ಮಲ್ಲಿನಾಥ ಸೇರಿದಂತೆ ಮತ್ತಿತ್ತರರರು ಇದ್ದರು.