‘ಸೇಡಂ’ ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಸಂಪುಟ ನಿರ್ಧಾರ: ಸಚಿವ ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಕಲಬುರಗಿ : ಜಿಲ್ಲೆಯ ಸೇಡಂ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ತನ್ನ ಒಪ್ಪಿಗೆಯನ್ನು ನೀಡಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶನಿವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಗತಿಪರ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಅಂದಾಜು ಜನಸಂಖ್ಯೆಯನ್ನು ಪರಿಗಣಿಸಿ, ಸೇಡಂ ಪುರಸಭೆಯೊಂದಿಗೆ ಕೆಲವು ಗ್ರಾಮಗಳನ್ನು ಸೇರಿಸಿ, ನಗರಸಭೆ ರಚಿಸುವುದು ಸಮರ್ಪಕವೆಂದು ಪರಿಗಣಿಸಿ ಸಚಿವ ಸಂಪುಟ ತಿರ್ಮಾನ ಕೈಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಕಲಂ-3, 9, 360 ಮತ್ತು 361ರನ್ವಯ ಶೆಡ್ಯೂಲ್-ಎ ನಲ್ಲಿ ಒಳಗೊಂಡ ಪ್ರದೇಶ ಹಾಗೂ ಶೆಡ್ಯೂಲ್-ಬಿ ನಲ್ಲಿನ ಆ ಪ್ರದೇಶದ ಗಡಿರೇಖೆ ಗುರುತಿಸಲಾಗಿರುವಂತೆ ಹಾಲಿ ಸೇಡಂ ಪುರಸಭೆಯ ವ್ಯಾಪ್ತಿಗೆ ಬಟಗೇರ.ಬಿ ಗ್ರಾಮ ಪಂಚಾಯಿತಿಯ ಬಟಗೇರ.ಬಿ ಮತ್ತು ಬಟಗೇರ.ಕೆ ಗ್ರಾಮಗಳನ್ನು ಸೇರ್ಪಡೆಗೊಳಿಸಿ ನಗರಸಭೆಯನ್ನು ರಚಿಸಿ ‘ಸೇಡಂ ನಗರಸಭೆ’ ಪ್ರದೇಶವೆಂದು ಉದ್ಘೋಷಿಸಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.