×
Ad

ಕನ್ನಡ ಮಾಧ್ಯಮದಲ್ಲಿ ಓದಿದ ಹುಡುಗ ಈಗ ಸಿಬಿಐ ಡಿಐಜಿ: ಯುವಜನತೆಗೆ ಸ್ಫೂರ್ತಿಯಾದ ಮಂಜುನಾಥ್ ಸಿಂಗೆ

Update: 2025-01-20 11:49 IST

ಮಂಜುನಾಥ್ ಸಿಂಗೆ

ಕಲಬುರಗಿ: ಜಿಲ್ಲೆಯ ತೀರಾ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಹುಡುಗನೋರ್ವ ಇದೀಗ ದೇಶದ ಪ್ರಮುಖ ಹುದ್ದೆಯಾಗಿರುವ ಸಿಬಿಐ ಡೆಪ್ಯುಟಿ ಇನ್ ಸ್ಪೆಕ್ಟರ್ ಜನರಲ್ (ಡಿಐಜಿ) ಶ್ರೇಣಿಗೆ ಏರುವ ಮೂಲಕ ಊರಿಗೆ ಕೀರ್ತಿ ತಂದಿದ್ದಾರೆ. ಅಫ್ಝಲ್ ಪುರ ತಾಲೂಕಿನ ಗೌರ್ (ಬಿ) ಗ್ರಾಮದಲ್ಲಿ ಹುಟ್ಟಿ ಬೆಳೆದ 2011ನೇ ಸಾಲಿನ ಐಪಿಎಸ್ ಅಧಿಕಾರಿ ಮಂಜುನಾಥ್ ಸಿಂಗೆ ಅವರೇ ಈ ಸಾಧಕ. ಅವರಿಂದಾಗಿ 'ಭೀಮಾತೀರ' ಎಂದೇ ಗುರುತಿಸಿಕೊಳ್ಳುತ್ತಿದ್ದ ಅಫ್ಝಲ್ ಪುರ ತಾಲೂಕು ಇದೀಗ ರಾಷ್ಟ್ರದ ಗಮನ ಸೆಳೆದಿದೆ.

ಸಿಬಿಐ ಡಿಐಜಿ ಹುದ್ದೆಗೇರಿದ್ದು ಯಾವಾಗ?:

ಐಪಿಎಸ್ ಅಧಿಕಾರಿ ಮಂಜುನಾಥ ಸಿಂಗೆ ಅವರನ್ನು ಸಿಬಿಐ ಡೆಪ್ಯುಟಿ ಇನ್ ಸ್ಪೆಕ್ಟರ್ ಜನರಲ್ (ಡಿಐಜಿ) ಹುದ್ದೆಗೆ ಭಡ್ತಿ ನೀಡಿ ಜ.13ರಂದು ಭಾರತ ಸರಕಾರದ ಅಧೀನ ಕಾರ್ಯದರ್ಶಿ ಸತ್ಯಂ ಶ್ರೀವಾಸ್ತವ ಆದೇಶ ಹೊರಡಿಸಿದ್ದಾರೆ. ಮಂಜುನಾಥ್ ಅವರು ಫೆಬ್ರವರಿ 28, 2028ರವರೆಗೆ ಅಂದರೆ ಒಟ್ಟು ಐದು ವರ್ಷಗಳ ಅವಧಿಗೆ ಈ ಅತ್ಯುನ್ನತ ಹುದ್ದೆಯನ್ನು ನಿಭಾಯಿಸಲಿದ್ದಾರೆ.

ಕನ್ನಡ ಮಾಧ್ಯಮದ ಹುಡುಗನ ಸಾಧನೆ:

ಮಂಜುನಾಥ ಅವರು ಅಫ್ಝಲ್ ಪುರ ತಾಲೂಕಿನ ಗೌರ್(ಬಿ) ಗ್ರಾಮದ ನಿವೃತ್ತ ಹೆಡ್ ಕಾನ್ ಸ್ಟೇಬಲ್ ಹುಚ್ಚಪ್ಪ ಸಿಂಗೆ ಅವರ ಏಕೈಕ ಪುತ್ರರಾಗಿದ್ದಾರೆ. ಮೂರನೇ ತರಗತಿಯವರೆಗೆ ಹುಟ್ಟೂರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಪ್ರಾರಂಭಿಸಿ, ತಂದೆಯ ವರ್ಗಾವಣೆಗೆ ಅನುಗುಣವಾಗಿ ಜಿಲ್ಲೆಯ ಚಿತ್ತಾಪುರದ ಶಿಶು ವಿಹಾರ ಶಾಲೆಯಲ್ಲಿ ನಾಲ್ಕರಿಂದ ಏಳನೇ ತರಗತಿ ಮುಗಿಸಿದ್ದಾರೆ. ಇದಾದ ಬಳಿಕ ಯಾದಗಿರಿಯ ನ್ಯೂ ಕನ್ನಡ ಸರಕಾರಿ ಶಾಲೆಯಲ್ಲಿ ಹೈಸ್ಕೂಲ್ ಮುಗಿಸಿದ ಅವರು, ಎಸೆಸೆಲ್ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದರು ಎಂದು ಮಂಜುನಾಥ ಅವರ ಚಿಕ್ಕಪ್ಪ ಮಲ್ಲಿಕಾರ್ಜುನ ಸಿಂಗೆ ಸಂತಸದ ಕ್ಷಣಗಳನ್ನು ನೆನೆಪಿಸಿಕೊಂಡಿದ್ದಾರೆ.

(ಮಂಜುನಾಥ್ ಸಿಂಗೆ ಅವರ ತಂದೆ-ತಾಯಿ)

 

ಐಪಿಎಸ್ ಗುರಿ ತಲುಪಿದ್ದು ಹೇಗೆ?:

ಧಾರವಾಡದ ಕರ್ನಾಟಕ ಕಾಲೇಜಿನ ಸೈನ್ಸ್ ವಿಭಾಗದಲ್ಲಿ ದ್ವಿತೀಯ ಪಿಯುಸಿ ಮುಗಿಸಿದ ಬಳಿಕ ಸಿಇಟಿ ಬರೆದು ಪ್ರತಿಷ್ಠಿತ ದ.ಕ. ಜಿಲ್ಲೆಯ ಸುರತ್ಕಲ್ ನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(NITK)ಯಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸುವುದಕ್ಕೆ ಇನ್ನೂ ಆರು ತಿಂಗಳು ಬಾಕಿ ಇರುವಾಗಲೇ ಅಮೆರಿಕ ಮೂಲದ ಪ್ರತಿಷ್ಠಿತ ಐಬಿಎಂ ಕಂಪೆನಿಗೆ ಸಾಫ್ಟ್ವೇರ್ ಇಂಜಿನಿಯರ್ ಆಗಿ ಮಂಜುನಾಥ ಆಯ್ಕೆಗೊಂಡರು. ಪಿಯುಸಿ ಹಂತದಿಂದಲೇ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ಸಣ್ಣದಾಗಿ ಸಿದ್ಧತೆ ಆರಂಭಿಸಿದ್ದ ಮಂಜುನಾಥ, ಐಬಿಎಂ ಸೇರ್ಪಡೆಗೊಂಡ ಬೆನ್ನಲ್ಲೇ ಯುಪಿಎಸ್ಸಿ ಪರೀಕ್ಷೆ ಎದುರಿಸಲು ಅಗತ್ಯವಿರುವ ಅಧ್ಯಯನವನ್ನು ಮತ್ತಷ್ಟು ಚುರುಕುಗೊಳಿಸಿದ್ದರು. 2009-10ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಐಆರ್ಎಸ್ ಉತ್ತೀರ್ಣರಾಗಿ ಗೋವಾದ ಆದಾಯ ತೆರಿಗೆ ಇಲಾಖೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗಿ 2010-11ರಲ್ಲಿ ಐಪಿಎಸ್ ಗುರಿ ತಲುಪುವಲ್ಲಿ ಯಶ ಕಂಡರು.

ಆರಂಭಿಕ ತರಬೇತಿಯ ಬಳಿಕ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಎಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಒಂದು ವರ್ಷದ ಬಳಿಕ ಗಡಚಿರೋಲಿ ವಿಭಾಗದ ನಕ್ಸಲ್ ನಿಗ್ರಹ ಪಡೆಯಲ್ಲಿ ಎಎಸ್ಪಿಯಾಗಿ ಎರಡು ವರ್ಷ ಸೇವೆ ಸಲ್ಲಿಸಿದರು. ಆ ಬಳಿಕ ಪಾಲ್ಗಾರ್ ಎಸ್ಪಿಯಾಗಿ, ನಂತರ ಮುಂಬೈ ವಸಾಯಿ ಪ್ರಾಂತದ ಡಿಸಿಪಿ ಹಾಗೂ ಬಳಿಕ ಬಾಂದ್ರಾ ಡಿಸಿಪಿಯಾಗಿ ಕಾರ್ಯನಿರ್ವಹಿಸಿದರು. ಇದಾದ ಬೆನ್ನಲ್ಲೇ ಕೋವಿಡ್ ಅವಧಿ ಮುಗಿಯುತ್ತಿದ್ದಂತೆಯೇ ಸಿಬಿಐ ಅಧಿಕಾರಿಯಾಗಿ ಸೇವೆ ಆರಂಭಿಸಿದ ಕೂಡಲೆ ಮಣಿಪುರ ಗಲಭೆಗಳ ಕುರಿತು ತನಿಖೆ ಕೈಗೊಳ್ಳುವ ಅಧಿಕಾರಿಗಳ ತಂಡದಲ್ಲಿ ಕಾರ್ಯನಿರ್ವಹಿಸಿ ಗಮನ ಸೆಳೆದರು.

ನಾಲ್ಕು ತಿಂಗಳ ಹಿಂದೆಯಷ್ಟೇ ಸಿಬಿಐ ಎಸ್ಪಿಯಾಗಿ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದ್ದ ಮಂಜುನಾಥ ಸಿಂಗೆ ಅವರಿಗೆ ಇದೀಗ ಸಿಬಿಐ ಡಿಐಜಿ ಹುದ್ದೆ ಒಲಿದು ಬಂದಿರುವುದು, ತವರು ಜಿಲ್ಲೆ ಕಲಬುರಗಿ ಸೇರಿದಂತೆ ಇಡೀ ರಾಜ್ಯದ ಯುವಪೀಳಿಗೆಗೆ ಸ್ಫೂರ್ತಿ ತುಂಬಿದೆ. ಗ್ರಾಮೀಣ ಭಾಗದಲ್ಲಿ ಬೆಳೆದಿದ್ದ ಹುಡುಗನೊಬ್ಬ ಇಂದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಗಮನಾರ್ಹ.

ಮಣಿಪುರ ಗಲಭೆ, ನೀಟ್ ತನಿಖೆಯ ಜವಾಬ್ದಾರಿ:

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಯಾಗಿ ಪದಭಾರ ವಹಿಸಿಕೊಂಡ ಕೂಡಲೇ ಮಣಿಪುರ ಗಲಭೆಗಳ ಕುರಿತು ತನಿಖೆ ಕೈಗೊಳ್ಳುವ ಜವಾಬ್ದಾರಿ ಐಪಿಎಸ್ ಅಧಿಕಾರಿ ಮಂಜುನಾಥ ಸಿಂಗೆ ಅವರ ಹೆಗಲಿಗೇರಿತ್ತು. ಈ ಕುರಿತು ಸಮಗ್ರ ತನಿಖೆ ನಡೆಸಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಬೇಕಿದ್ದ ತಂಡದ ಭಾಗವಾಗಿದ್ದ ಮಂಜುನಾಥ ಅವರಿಗೆ ನೀಟ್ ಪರೀಕ್ಷಾ ರಾದ್ಧಾಂತದ ತನಿಖೆಯ ಹೊಣೆಯನ್ನೂ ಕೇಂದ್ರ ಸರಕಾರ ವಹಿಸಿತ್ತು. ಈ ಎರಡೂ ಜವಾಬ್ದಾರಿಗಳನ್ನು ಅತ್ಯಂತ ಚಾಣಾಕ್ಷತೆಯಿಂದ ನಿಭಾಯಿಸಿದ ಅವರಿಗೆ ಈಗ ಸಿಬಿಐ ಡಿಐಜಿ ಹುದ್ದೆ ಅರಸಿಕೊಂಡು ಬಂದಿದೆ.

 

ಮಂಜುನಾಥ್ ಸಿಂಗೆಗೆ ಅಭಿನಂದನೆಗಳ ಸುರಿಮಳೆ:

ನೂತನವಾಗಿ ಡಿಐಜಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಂಜುನಾಥ್ ಸಿಂಗೆ ಅವರನ್ನು ಜಿಲ್ಲೆಯ ರಾಜಕೀಯ, ರೈತ, ಕಾರ್ಮಿಕ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾಕಾಂಕ್ಷಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆಗಳನ್ನೇ ಸುರಿದಿದ್ದಾರೆ. ಈ ಸುದ್ದಿ ತಿಳಿದ ಗೌರ್ (ಬಿ)ಗ್ರಾಮಸ್ಥರು ಕೂಡ ಖುಷಿಯಲ್ಲಿದ್ದಾರೆ.

ದಕ್ಷ ಕಾರ್ಯಕ್ಕೆ ಒಲಿದುಬಂತು ರಾಷ್ಟ್ರಪತಿ ಪದಕ:

ದಕ್ಷವಾಗಿ ಕಾರ್ಯ ನಿರ್ವಹಿಸಿದ್ದಕ್ಕಾಗಿ ಐಪಿಎಸ್ ಮಂಜುನಾಥ್ ಸಿಂಗೆ ಅವರಿಗೆ ರಾಷ್ಟ್ರಪತಿ ಪದಕ, ಮಹಾರಾಷ್ಟ್ರ ಸರಕಾರದಿಂದ ಮಹಾರಾಷ್ಟ್ರ ಕೀ ಶಾನ್ ಸೇರಿದಂತೆ ಹಲವು ಪ್ರಮುಖ ಪ್ರಶಸ್ತಿ, ಪದಕಗಳು ಒಲಿದುಬಂದಿವೆ.

ನಮ್ಮ ಅಫ್ಝಲ್ ಪುರ ಕ್ಷೇತ್ರದ ಪುಟ್ಟ ಗ್ರಾಮದಿಂದ ಬಂದ ಒಬ್ಬ ಪ್ರತಿಭಾವಂತ ಯುವಕ ಇಂದು ಸಿಬಿಐ ಡಿಐಜಿ ಹುದ್ದೆ ಏರಿರುವುದು ನನಗಂತು ವೈಯಕ್ತಿಕವಾಗಿ ಹೆಚ್ಚು ಖುಷಿ ತಂದಿದೆ. ಇದು ಪ್ರತಿಯೊಬ್ಬರಿಗೂ ಸ್ಫೂರ್ತಿ ತುಂಬಲಿ.

- ಎಂ.ವೈ.ಪಾಟೀಲ್, ಶಾಸಕರು, ಅಫಜಲಪುರ

ಅಫ್ಝಲ್ ಪುರ ತಾಲೂಕಿನ ಸಣ್ಣ ಗ್ರಾಮದಿಂದ ಬಂದ ಹುಡುಗನೊಬ್ಬ ಕನ್ನಡ ಮಾಧ್ಯಮದ ಶಾಲೆಗಳಲ್ಲೇ ಕಲಿತು ಈಗ ದೇಶದ ಅತ್ಯುನ್ನತ ಹುದ್ದೆ ಏರಿರುವುದು ಸಣ್ಣ ಸಾಧನೆ ಅಲ್ಲ. ಮಂಜುನಾಥ ಅವರ ಈ ಪ್ರೇರಣಾದಾಯಕ ಬೆಳವಣಿಗೆ ಇಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ನಿಜಕ್ಕೂ ಆದರ್ಶವಾಗುವಂತಿದೆ.

-ಶಿವಕುಮಾರ ನಾಟೀಕಾರ್, ಯುವ ಮುಖಂಡ, ಅಫ್ಝಲ್ ಪುರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ದಸ್ತಗೀರ ನದಾಫ್ ಯಳಸಂಗಿ

contributor

Similar News