×
Ad

ಚಿಂಚೋಳಿ | ಸುಲೇಪೇಟ ತಾಲೂಕು ರಚನೆಗೆ ನಾಗರಿಕ ಹೋರಾಟ ಸಮಿತಿ ರಚನೆ

ಅಧ್ಯಕ್ಷರಾಗಿ ಮಹಾರುದ್ರಪ್ಪ ದೇಸಾಯಿ ನೇಮಕ

Update: 2026-03-09 20:31 IST

ಚಿಂಚೋಳಿ: ಸುಲೇಪೇಟವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂಬ ಬೇಡಿಕೆಗೆ ಬಲ ನೀಡುವ ಉದ್ದೇಶದಿಂದ ಸುಲೇಪೇಟ ಗ್ರಾಮದ ಖಟ್ವಾಂಗೇಶ್ವರ ಮಠದಲ್ಲಿ ಗ್ರಾಮಸ್ಥರ ಸಭೆ ನಡೆಯಿತು.

ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಒಮ್ಮತದಿಂದ ಗ್ರಾಮದ ಮುಖಂಡರು ಹಾಗೂ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಹಾರುದ್ರಪ್ಪ ದೇಸಾಯಿ ಅವರನ್ನು “ಸುಲೇಪೇಟ ತಾಲೂಕು ರಚನೆ ನಾಗರಿಕ ಹೋರಾಟ ಸಮಿತಿ”ಯ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.

ನೂತನ ಅಧ್ಯಕ್ಷ ಮಹಾರುದ್ರಪ್ಪ ದೇಸಾಯಿ ಮಾತನಾಡಿ, ನಿಜಾಮರ ಕಾಲದಿಂದಲೂ ಸುಲೇಪೇಟವು ಪ್ರಮುಖ ವ್ಯಾಪಾರ ಕೇಂದ್ರವಾಗಿ ಗುರುತಿಸಿಕೊಂಡಿದೆ. ಹಿಂದಿನ ಹೋರಾಟಗಳ ಫಲವಾಗಿ ಗ್ರಾಮದಲ್ಲಿ ನಾಡಕಚೇರಿ, ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗಿವೆ ಎಂದು ಹೇಳಿದರು.

ಸುಲೇಪೇಟ ಬಹಳ ಹಿಂದೆಯೇ ತಾಲೂಕು ಕೇಂದ್ರವಾಗಬೇಕಾಗಿತ್ತು. ಆದರೆ ಅದು ಇನ್ನೂ ಆಗಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸಲಾಗುವುದು. ಕಾಳಗಿ, ಯಡ್ರಾಮಿ ಹಾಗೂ ಕಮಲಾಪೂರ ತಾಲೂಕುಗಳು ಆಗುವ ಸಂದರ್ಭದಲ್ಲಿ ಅವುಗಳ ಜನಸಂಖ್ಯೆ ಸುಲೇಪೇಟಕ್ಕಿಂತ ಕಡಿಮೆ ಇದ್ದರೂ ಹೋರಾಟದ ಫಲವಾಗಿ ತಾಲೂಕುಗಳಾಗಿ ರೂಪುಗೊಂಡಿವೆ. ಅದೇ ರೀತಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ನಮ್ಮ ಬೇಡಿಕೆ ಖಂಡಿತ ಈಡೇರುತ್ತದೆ ಎಂದು ಹೇಳಿದರು.

ಮಾಜಿ ತಾಪಂ ಸದಸ್ಯ ತಾಹೇರ ಪಟೇಲ್ ಮಾತನಾಡಿ, ಸುಲೇಪೇಟ ಗ್ರಾಮದ ಜನರು ಪಕ್ಷಭೇದ ಮರೆತು ಗ್ರಾಮದ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು. ಚಿಂಚೋಳಿ ತಾಲೂಕಿನ ವ್ಯಾಪಾರ ವಹಿವಾಟಿನಲ್ಲಿ ಸುಲೇಪೇಟ ತನ್ನದೇ ಆದ ಗುರುತು ಮೂಡಿಸಿಕೊಂಡಿದ್ದು, ತಾಲೂಕಿನಲ್ಲಿ ಅತಿದೊಡ್ಡ ಹೋಬಳಿಯಾಗಿದೆ ಎಂದರು.

ಸುಲೇಪೇಟ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಕುರಿತು ಈಗಾಗಲೇ ಸಚಿವರ ಗಮನಕ್ಕೆ ತರಲಾಗಿದೆ. ಪಟ್ಟಣ ಪಂಚಾಯಿತಿಯಾಗಿದರೆ ಗ್ರಾಮದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ. ತಾಲೂಕು ರಚನೆಗಾಗಿ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಮೇಲೆ ಒತ್ತಡ ತರಲು ಎಲ್ಲರೂ ಒಂದಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಾಂದ್‌ ಪಾಷಾ ಮೋಮಿನ್, ಬಸವರಾಜ ಸುಲೇಪೇಟ, ರುದ್ರಮುನಿ ರಾಮತಿರ್ಥಕರ, ರಾಜಕ್ ಪಟೇಲ್, ಮಲ್ಲಿಕಾರ್ಜುನ ದೇಸಾಯಿ, ಮಾಜಿ ಗ್ರಾಪಂ ಅಧ್ಯಕ್ಷ ಜಹಿರೋದ್ದಿನ್ ಪಟೇಲ್, ಮುರಗೆಪ್ಪ ಕುಕಡಿ, ಶಂಕ್ರಯ್ಯ ಸ್ವಾಮಿ ಯಕ್ಮಾಯಿ, ಶಿವಕುಮಾರ್ ಸೊಂತ, ಶಿವಲಿಂಗಯ್ಯ ಶಾಸ್ತ್ರಿ, ನಾಮದೇವ ಪಾಟೀಲ, ಮಹೇಶ್ ಬೆಮಳಗಿ, ನಸೀರ್ ಮದರಗಿ, ಮಾಣಿಕರಾವ್ ಗುಲಗುಂಜಿ, ಸುನೀಲಕುಮಾರ ಕೋರಿ, ರವಿ ರಾಠೋಡ್, ಶ್ರೀನಿವಾಸ್ ರಾಗಂ, ರಾಜು ದಬ್ಬಾ, ಮಲ್ಲಿಕಾರ್ಜುನ ಹುಮನಾಬಾದಿ, ಬಾಬಣ್ಣ ಗುಲಗುಂಜಿ, ವೀರೇಶ್ ಹೀರೇನ, ಅಂಬ್ರೀಶ ಅಣದೂರು, ಪರಮೇಶ್ವರ ಪಾಟೀಲ, ಶಿವಾನಂದ ಸ್ವಾಮಿ, ನಾಗೇಶ್ ಮುತ್ತಟ್ಟಿ, ಸಿದ್ದಯ್ಯ ಸ್ವಾಮಿ, ವಿಜಯಕುಮಾರ್ ಮೇದರ ಸೇರಿದಂತೆ ಗ್ರಾಮದ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News