ವಾಡಿ | ಮಕ್ಕಳಿಗೆ ಸಮಯ ನೀಡಿ ನಿಗಾವಹಿಸಬೇಕು: ರೇವಮ್ಮ ಗುರ್ಜಾಲಕರ
ವಾಡಿ: ಹೆತ್ತವರು ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ಮಕ್ಕಳಿಗೆ ಸಮಯ ನೀಡಿ ಅವರ ಮೇಲೆ ನಿಗಾವಹಿಸಬೇಕು. ಇಲ್ಲವಾದರೆ ಎಳೆಯ ಮಕ್ಕಳು ಹಾದಿ ತಪ್ಪುವ ಸಾಧ್ಯತೆ ಇದೆ ಎಂದು ಆವಿಷ್ಕಾರ ಸಾಂಸ್ಕೃತಿಕ ಸಂಘಟನೆಯ ಕಲಬುರಗಿ ಜಿಲ್ಲಾ ಸಮಿತಿ ಸದಸ್ಯೆ ರೇವಮ್ಮ ಎಸ್. ಗುರ್ಜಾಲಕರ ಹೇಳಿದರು.
ಹಲಕರ್ಟಿ ಬಸವೇಶ್ವರ ವಿದ್ಯಾಭಿವೃದ್ಧಿ ಶಿಕ್ಷಣ ಸಂಸ್ಥೆಯ 23ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಮಕ್ಕಳ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಜೊತೆಗಿರುವಾಗ ಮೊಬೈಲ್ ಹಿಡಿದುಕೊಳ್ಳದೇ ಅವರೊಂದಿಗೆ ಬೆರೆತು ಮಾತನಾಡಬೇಕು. ಅವರ ಅಭ್ಯಾಸ ಹಾಗೂ ಬೆಳವಣಿಗೆಯ ಕಡೆ ಗಮನ ಹರಿಸಬೇಕು. ಮಕ್ಕಳೇ ನಮ್ಮ ನಿಜವಾದ ಆಸ್ತಿ ಆಗಿದ್ದು, ಅವರು ದಾರಿ ತಪ್ಪದಂತೆ ನೋಡಿಕೊಳ್ಳಲು ಅವರೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸುವುದು ಅತ್ಯಂತ ಮುಖ್ಯ ಎಂದು ಹೇಳಿದರು.
ಇಂದಿನ ಶಿಕ್ಷಣ ವ್ಯವಸ್ಥೆ ಅಜ್ಞಾನ ಕಳೆದು ಜ್ಞಾನ ನೀಡಬೇಕಾದರೂ ಅದು ಕೇವಲ ಅಂಕಗಳಿಗೆ ಸೀಮಿತವಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಸಂಕುಚಿತ ಮನೋಭಾವನೆ ಬೆಳೆಯುವ ಸಾಧ್ಯತೆ ಇದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯೇ ಶಿಕ್ಷಣದ ಮುಖ್ಯ ಉದ್ದೇಶವಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಲೆ, ಸಾಹಿತ್ಯ, ಮನೋರಂಜನೆ, ಆಟ ಹಾಗೂ ನೀತಿ–ನೈತಿಕ ಮೌಲ್ಯಗಳಂತಹ ಮಾನವೀಯ ಅಂಶಗಳ ಬೋಧನೆ ಇಂದಿನ ಮಕ್ಕಳಿಗೆ ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್ ಕಲಬುರಗಿ)ಯ ಬೋಧಕ ಸತೀಶ್ ಎಂ ಜಿ, ಮಹಿಳಾ ಸಾಂಸ್ಕೃತಿಕ ಸಂಘಟನೆ ಎಐಎಂ ಎಸ್ ಎಸ್ ನ ಜಿಲ್ಲಾ ಅಧ್ಯಕ್ಷೆ ಗುಂಡಮ್ಮ ಮಡಿವಾಳ, ರಂಗಕಲಾವಿದ ಶಿವಣ್ಣ ಬಿ ಹಿಟ್ಟಿನ, ಪ್ರಮುಖರಾದ ಸೂಗಣ್ಣ ಚಂದನಕೇರಿ, ದತ್ತಾತ್ರೇಯ ಬುಕ್ಕಾ, ಮಲ್ಲಿಕಾರ್ಜುನ ಹಣ್ಣಿಕೇರಾ, ಸಂಸ್ಥೆ ಉಪಾಧ್ಯಕ್ಷ ಭಾಗಣ್ಣ ಬುಕ್ಕಾ, ಭೀಮರಾಯ ಕೊಲ್ಕುಂದಿ, ಗುಂಡಣ್ಣ ಎಂ.ಕೆ, ಶಿವಪ್ಪ ಇಸಬಾ, ಚಂದ್ರಕಾಂತ ಇಸಬಾ, ಶಿವಕುಮಾರ ಛತ್ರಿ, ಗೌರಮ್ಮ ಸರಡಗಿ, ಸಾವಿತ್ರಿಬಾಯಿ ದೋಶೆಟ್ಟಿ, ಗೋದಾವರಿ ಕಾಂಬಳೆ ಹಾಗೂ ಇನ್ನಿತರರು ಇದ್ದರು. ಮುಖ್ಯ ಶಿಕ್ಷಕ ಶರಣಕುಮಾರ ದೋಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಲಬುರಗಿ ಜಿಲ್ಲಾ ಮಟ್ಟದ ಬಾಲಕರ ಖೋ ಖೋ ಪಂದ್ಯದಲ್ಲಿ ಚಿತ್ತಾಪುರ ತಾಲ್ಲೂಕು ಪ್ರತಿನಿಧಿಸಿದ ಶಾಲೆಯ ವಿದ್ಯಾರ್ಥಿಗಳನ್ನು ಸಂಸ್ಥೆಯ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಸಿದ್ದರಾಜ ಮಲ್ಕಂಡಿ ಸನ್ಮಾನಿಸಿ ಗೌರವಿಸಿದರು.
ನಂತರ ವಿದ್ಯಾರ್ಥಿಗಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.