ಚಿಂಚೋಳಿ | ಶಾದಿಪುರ ಗ್ರಾಮದ ಕೆರೆ ದುರಸ್ತಿಗೆ ಆಗ್ರಹ
ಕಲಬುರಗಿ : ಚಿಂಚೋಳಿ ತಾಲ್ಲೂಕಿನ ಶಾದಿಪುರ ಗ್ರಾಮದಲ್ಲಿರುವ ಏಕೈಕ ಕೆರೆ ಕಳೆದ ಐದು ವರ್ಷಗಳಿಂದ ಸಂಪೂರ್ಣವಾಗಿ ಒಡೆದು ನೀರಿಲ್ಲದೆ ಒಣಗಿರುವ ಪರಿಣಾಮ, ಗ್ರಾಮಸ್ಥರು ಕುಡಿಯುವ ನೀರಿನ ಗಂಭೀರ ತೊಂದರೆಯನ್ನೆದುರಿಸುತ್ತಿದ್ದು, ಕೃಷಿಕರು ವಿಶೇಷವಾಗಿ ಕಬ್ಬು ಬೆಳೆಗಾರರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಅದನ್ನು ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಸೇನೆ) ತಾಲ್ಲೂಕು ಅಧ್ಯಕ್ಷ ಲಿಂಬಾಜಿ ಚವಾಣ್ ಆಗ್ರಹಿಸಿದ್ದಾರೆ.
ಈ ಕುರಿತು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರಿಗೆ ಮನವಿ ಮಾಡಿದ ಅವರು, ಈ ಕೆರೆ ಯಾವ ಇಲಾಖೆಯ ಅಧೀನದಲ್ಲಿದೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಕಳೆದ ವರ್ಷ ಶಾಸಕರು ಅಂದಾಜು ತಯಾರಿಸಲು ಸೂಚಿಸಿದ್ದರೂ ಮುಂದೆ ಯಾವುದೇ ಕ್ರಮ ಜರುಗಿಲ್ಲ. ಇದು ಸಂಪೂರ್ಣ ನಿರ್ಲಕ್ಷ್ಯದ ಸಂಕೇತವಾಗಿದೆ. ಸ್ಥಳೀಯರ ಕುಡಿಯುವ ನೀರು, ಜಾನುವಾರುಗಳ ಪಾನೀಯ ಹಾಗೂ ಕೃಷಿಗೆ ಇದೊಂದು ಜೀವನಾಡಿಯಾಗಿದೆ. ಆದರೆ ಈಗ ಕೆರೆ ಅನಾಥವಾಗಿರುವುದು ಸಂಕಷ್ಟಕ್ಕೆ ದೂಡಿದಂತಾಗಿದೆ. ಕೂಡಲೇ ದುರಸ್ತಿ ಕಾರ್ಯ ಮಾಡಬೇಕೆಂದು ಒತ್ತಾಯಿಸಿದರು.
ಈ ಕುರಿತು ಶಾದಿಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಸದಸ್ಯರು, ಸ್ಥಳೀಯ ಗ್ರಾಮಸ್ಥರೊಂದಿಗೆ ತಮ್ಮ ಸಮಸ್ಯೆಯನ್ನು ಪ್ರಕಟವಾಗಿ ಬಿಂಬಿಸಬೇಕು ಎಂಬ ಉದ್ದೇಶದಿಂದ ಇಂದು ಸ್ಥಳಕ್ಕೆ ಭೇಟಿ ನೀಡಿದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಸೇನೆ) ಚಿಂಚೋಳಿ ತಾಲೂಕು ಅಧ್ಯಕ್ಷರಾದ ಲಿಂಬಾಜಿ ಚವಾಣ್ ಅವರು ಉಪಸ್ಥಿತರಿದ್ದು, ಸಮಸ್ಯೆಗೆ ತ್ವರಿತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಸ್ಥಳೀಯ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.