ಚಿಂಚೋಳಿ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಜಗನ್ನಾಥ ಶೇರಿಕಾರ
ಕಲಬುರಗಿ: ಪರಿಸರ ಸಂರಕ್ಷಣೆ ಭೂಮಿಯ ಮೇಲೆ ಜೀವಿಸುವ ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಜವಾಬ್ದಾರಿಯಾಗಿದೆ. ಪರಿಸರ ಮಾಲಿನ್ಯದಿಂದಾಗಿ ಕ್ಯಾನ್ಸರ್ ರೋಗಿಗಳು ಪ್ರತಿ ಗ್ರಾಮದಲ್ಲಿ ಸಿಗುವಂತಾಗಿದೆ. ಪರಿಸರ ಸಮತೋಲನೆ ಕಾಪಾಡಲು ಹೆಚ್ಚು ಸಸಿಗಳನ್ನು ಬೆಳೆಸಿ ಕಡಿಮೆ ಪ್ಲಾಸ್ಟಿಕ್ ಬಳಸಲು ಮುಂದಾಗಬೇಕೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಜಗನ್ನಾಥ ಶೇರಿಕಾರ ತಿಳಿಸಿದರು.
ಅವರು ಚಿಂಚೋಳಿ ತಾಲ್ಲೂಕಿನ ಪೋಲಕಪಳ್ಳಿಯ ಆದರ್ಶ ವಿದ್ಯಾಲಯದಲ್ಲಿ ಗುರುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಘಟಕ ಹಾಗೂ ಬಿಸಿ ಟ್ರಸ್ಟ್ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಪ್ಲಾಸ್ಟಿಕ್ ಬಳಕೆಯಿಂದ ಭೂಮಿಯ ಆರೋಗ್ಯ ಕೆಡುತ್ತಿದೆ. ಮರಗಳು ಬೆಳೆಸುವುದರಿಂದ ಪ್ರಕೃತಿಯಲ್ಲಿ ಸಮತೋಲನೆ ಉಂಟಾಗುತ್ತದೆ. ಯಾವುದೇ ಕಂಪೆನಿಯಿಂದ ನೀರು, ಮಣ್ಣು, ರಕ್ತ ತಯಾರಿಸಲು ಸಾಧ್ಯವಿಲ್ಲ ಆದರೆ ವ್ಯಕ್ತಿಯಿಂದ ಈ ಮೂರು ತಯಾರಿಸಲು ಸಾಧ್ಯವಿದೆ. ಹೆಚ್ಚು ಮರಗಳು ಬೆಳೆಸಿದರೆ ಮಣ್ಣಿನ ಸವಕಳಿ ತಡೆದು ಹೊಸದಾಗಿ ಮಣ್ಣು ತಯಾರಾಗುತ್ತದೆ, ಇದರಿಂದ ಕಾಲ ಕಾಲಕ್ಕೆ ಮಳೆ ಸುರಿಯುತ್ತದೆ ಎಂದರು.
ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀದೇವಿ ಮಂಜುನಾಥ ಕೊರವಿ, ಜಿಲ್ಲಾ ಜನಜಾಗೃತಿ ಸಮಿತಿ ಉಪಾಧ್ಯಕ್ಷ ನರಸಮ್ಮ ಲಕ್ಷ್ಮಣ ಅವುಂಟಿ, ಸದಸ್ಯ ಸುರೇಶ ದೇಶಪಾಂಡೆ, ಯೋಜನಾಧಿಕಾರಿ ಗೋಪಾಲ, ಮುಖ್ಯಶಿಕ್ಷಕ ದೇವೇಂದ್ರಪ್ಪ ಹೋಳ್ಕರ್ ಮಾತನಾಡಿದರು.
ಮೋಹನ ಸ್ವಾಗತಿಸಿದರು. ವಾಹಬ ನಿರೂಪಿಸಿದರು. ಸತೀಶ ವಂದಿಸಿದರು. ಕಾರ್ಯಕ್ರಮದಲ್ಲಿ ಶೌರ್ಯ ತಂಡದ ಮಂಜುನಾಥ ಸುನಾಗಮಠ, ಸಂಜೀವಕುಮಾರ ಪಾಟೀಲ ಯಂಪಳ್ಳಿ, ಗಣೇಶ ಹೂಗಾರ, ಮೇಲ್ವಿಚಾರಕಿ ಕಾವ್ಯಾ ಮತ್ತು ಸಏವಾ ಪ್ರತಿನಿಧಿಗಳು ಹಾಗೂ ಮಕ್ಕಳು ಇದ್ದರು.