×
Ad

ಚಿಂಚೋಳಿ | ಅಕ್ಷರ ಕ್ರಾಂತಿಯ ಜ್ಯೋತಿ ಹಚ್ಚಿದ ಫಾತೀಮಾ ಶೇಖ್ ಅವರ ಸಾಮಾಜಿಕ ಕಳಕಳಿ ಸ್ಮರಣೀಯ: ಮಾರುತಿ ಗಂಜಗಿರಿ

Update: 2026-01-13 17:17 IST

ಚಿಂಚೋಳಿ : ಭಾರತದಲ್ಲಿನ ಅಜ್ಞಾನ, ಅಂಧಕಾರ ಹಾಗೂ ಮೂಢನಂಬಿಕೆಗಳನ್ನು ಮೆಟ್ಟಿ ನಿಂತು ಅಕ್ಷರ ಕ್ರಾಂತಿಯ ಜ್ಯೋತಿಯನ್ನು ಹಚ್ಚಿದ ಮುಸ್ಲಿಂ ಸಮುದಾಯದ ಪ್ರಥಮ ಶಿಕ್ಷಕಿ ಫಾತೀಮಾ ಶೇಖ್ ಅವರ ಸಾಮಾಜಿಕ ಕಳಕಳಿ ಇಂದಿಗೂ ಸ್ಮರಣೀಯವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಮಾರುತಿ ಗಂಜಗಿರಿ ಹೇಳಿದರು.

ತಾಲ್ಲೂಕಿನ ಅಣವಾರ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಫಾತೀಮಾ ಶೇಖ್, ಮುಕ್ತಾ ಸಾಳ್ವೆ ಹಾಗೂ ಸ್ವಾಮಿ ವಿವೇಕಾನಂದರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಮುಂದುವರಿದು ಮಾತನಾಡಿದ ಗಂಜಗಿರಿ, ಫಾತೀಮಾ ಶೇಖ್ ಅವರು ವಿಧವಾ ವಿವಾಹದ ಪರವಾಗಿ, ಸತಿ ಸಹಗಮನ ಪದ್ಧತಿಯ ವಿರುದ್ಧ ಹಾಗೂ ಮಹಿಳಾ ಸಬಲೀಕರಣದ ವಿಚಾರಗಳಲ್ಲಿ ಮುಂಚೂಣಿಯಲ್ಲಿ ನಿಂತು ಧ್ವನಿ ಎತ್ತಿದವರು. ದಲಿತ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಸಮಾನತೆಯ ಸಂಬಂಧಗಳನ್ನು ಬೆಳೆಸುವ ಮೂಲಕ ಜಾತ್ಯತೀತ ತತ್ವಗಳ ಜಾರಿಗೆ ಅವರು ಶ್ರಮಿಸಿದರು ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮತೀನ್ ಸೌದಗಾರ ಮಾತನಾಡಿ, ಪ್ರಸ್ತುತ ಸಮಾಜಕ್ಕೆ ಸ್ವಾಮಿ ವಿವೇಕಾನಂದರ ತತ್ವಗಳು ಹಾಗೂ ಆದರ್ಶಗಳು ಅತ್ಯಗತ್ಯವಾಗಿವೆ. ವಿದ್ಯಾರ್ಥಿಗಳು ಶಾಲಾ ಹಂತದಿಂದಲೇ ಅವುಗಳನ್ನು ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಹಾಫೀಜ್ ಅಬ್ದುಲ್, ಮೋಹನ ಐನಾಪೂರ ಹಾಗೂ ಸಾಗರ ಆನಂದಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ಎಂ.ಕೆ. ಟೇಲರ್, ಹಾಫೀಜ್ ಇಸ್ಮಾಯಿಲ್, ಭಾಗ್ಯವಂತ ಕನಕಪೂರ, ಹರೀಷ್ ದೇಗಲ್ಮಡಿ ಹಾಗೂ ಸಿದ್ದಲಿಂಗ ರಂಗನೂರ ಉಪಸ್ಥಿತರಿದ್ದರು. ಶಾಲೆಯ ಪ್ರಾಂಶುಪಾಲ ಸೈಯದ್ ಹಸನ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಜಗದೀಶ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News