ಚಿಂಚೋಳಿ | ಸದೃಢ ದೇಹ, ಮನಸ್ಸಿಗೆ ಕ್ರೀಡೆ ಬಹಳ ಮುಖ್ಯ: ಇಒ ಸಂತೋಷ
ಕಲಬುರಗಿ: ಕ್ರೀಡೆಯು ಮನುಷ್ಯನ ಜೀವನದಲ್ಲಿ ಅತೀ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸದೃಢ ದೇಹ ಮತ್ತು ಸದೃಢ ಮನಸ್ಸಿಗೆ ಕ್ರೀಡೆ ಬಹಳ ಮುಖ್ಯವಾಗಿದೆ ಎಂದು ಚಿಂಚೋಳಿ ತಾ.ಪಂ ಇಒ ಸಂತೋಷ ಕುಮಾರ್ ಚವ್ಹಾಣ ಹೇಳಿದರು.
ಚಿಂಚೋಳಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ 2025- 26ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ಕ್ರೀಡೆಯನ್ನು ಸಮತೋಲನವಾಗಿ ನೋಡಬೇಕು. ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿದಾಗ ನಾವೆಲ್ಲರೂ ಒಂದೇ ಎಂಬ ಮನೋಭಾವ ಮೂಡುತ್ತದೆ ಎಂದು ಹೇಳಿದರು.
ಬಿಇಒ ವಿ ಲಕ್ಷ್ಮಯ್ಯ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯವಾಗಿದೆ. ಮಕ್ಕಳ ಆಸಕ್ತಿ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕು. ಕ್ರೀಡೆಯಲ್ಲಿ ಗೆಲುವು ಜವಾಬ್ದಾರಿ ಹೆಚ್ಚಿಸುತ್ತದೆ, ಸೋಲು ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಮಕ್ಕಳು ಸ್ನೇಹಪೂರ್ವಕವಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು' ಎಂದು ಸಲಹೆ ನೀಡಿದರು.
ಚಿಂಚೋಳಿ ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕ್ರೀಡಾ ಕೂಟದಲ್ಲಿ ಪಾಲ್ಗೊಂಡ ಶಿಕ್ಷಕರಿಗೆ ಗರಗಪಳ್ಳಿ ಗ್ರಾಮ ಮುಖಂಡ ಗೋಪಾಲ ರೆಡ್ಡಿ ಅವರು ಟಿ ಶರ್ಟ್ ವಿತರಿಸಿದರು.
ಈ ಸಂದರ್ಭದಲ್ಲಿ ಟಿಪಿಒ ನಾರಾಯಣ ರೆಡ್ಡಿ ದೇವಿಂದ್ರಪ್ಪ ಹೋಳ್ಕರ್, ಶಾಮರಾವ, ಮಲ್ಲಿಕಾರ್ಜುನ ಪಾಲಾಮೂರ್, ನಾಗಶೆಟ್ಟಿ ಭದ್ರಶೆಟ್ಟಿ, ಖುರ್ಷೀದ ಮಿಯ್ಯ, ಅಶೋಕ ಹುವಿನಬಾವಿ, ಮಲ್ಲಿಕಾರ್ಜುನ ನಲ್ಲಿ, ಮಕ್ಸೂದ್ ಅಲಿ, ಗೋವಿಂದ ಸಂಗೇದ, ಸಂಜೀವಕುಮಾರ ಪಾಟೀಲ್, ಮಲ್ಲಿಕಾರ್ಜುನ, ಮಾರುತಿ ಪತಾಂಗೆ ಇತರರು ಇದ್ದರು.