Chincholi | ಸೆ.1ರಂದು ‘ಸುಲೇಪೇಟ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ
ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮದ ಮಹಾಂತೇಶ್ವರ ಕಲ್ಯಾಣ ಮಂಟಪದಲ್ಲಿ ಸೆ.1ರಂದು ಸ್ನೇಹಾಬಂಧು ಸಂಸ್ಥೆಯ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ‘ಸುಲೇಪೇಟ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಮಾಧ್ಯಮ ಕ್ಷೇತ್ರದಲ್ಲಿ ಜಗನ್ನಾಥ ಶೇರಿಕಾರ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಶಶಿಕಾಂತ ಶೆಳ್ಳಗಿ, ಕೃಷಿ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ದೇಸಾಯಿ, ಸಾಮಾಜಿಕ ಕ್ಷೇತ್ರದಲ್ಲಿ ಸಂಗಪ್ಪ ಶೆಟ್ಟಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನಿವೃತ್ತ ಪ್ರಾಂಶುಪಾಲ ನಿಂಗಪ್ಪ ಹಿರೇಕುರ್ ಅವರನ್ನು ‘ಸುಲೇಪೇಟ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಂದು ಬೆಳಿಗ್ಗೆ ಪ್ರಶಸ್ತಿ ಪುರಸ್ಕೃತರನ್ನು ತೆರೆದ ವಾಹನದಲ್ಲಿ ಬಸವೇಶ್ವರ ವೃತ್ತದಿಂದ ಮಹಾಂತೇಶ್ವರ ಕಲ್ಯಾಣ ಮಂಟಪದವರೆಗೆ ಮೆರವಣಿಗೆಯಲ್ಲಿ ಕರೆತರಲಾಗುವುದು. ಬಳಿಕ ವೇದಿಕೆ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಸಲ್ಲಿಸಿರುವ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸ್ನೇಹಾಬಂಧು ಸಂಸ್ಥೆಯ ಮೋಯಿಜ್ ಪಟೇಲ್ ತಿಳಿಸಿದ್ದಾರೆ.