ವಾಡಿ : ಬ್ರಿಟಿಷರ ಶೋಷಣೆ ವಿರುದ್ಧ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಕ್ರಾಂತಿಕಾರಿಗಳಾದ ಶಹೀದ್ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರು ಸಾವಿಗೆ ಹೆದರಿ ಕಣ್ಣೀರು ಹಾಕಲಿಲ್ಲ. ಬದಲಿಗೆ ನಕ್ಕು ನೇಣಿಗೆ ಮುತ್ತಿಟ್ಟು ಪ್ರಾಣ ತ್ಯಾಗ ಮಾಡಿದರು ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಎಂ. ಗುರುಜಾಲಕರ್ ಹೇಳಿದರು.

ಮಂಗಳವಾರ ಪಟ್ಟಣದ ಬಸವ ನಗರದ ನಂದೀಶ್ವರ ದೇವಸ್ಥಾನದಲ್ಲಿ ಎಐಡಿವೈಒ ಯುವಜನ ಸಂಘಟನೆ ವತಿಯಿಂದ ಆಯೋಜಿಸಿದ್ದ ಶಹೀದ್ ಭಗತ್ ಸಿಂಗ್ ಅವರ 119ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

12 ವರ್ಷದ ಬಾಲಕನಾಗಿದ್ದಾಗಲೇ ಭಗತ್ ಸಿಂಗ್ ಬ್ರಿಟಿಷರ ದಬ್ಬಾಳಿಕೆ, ದೌರ್ಜನ್ಯ ಹಾಗೂ ಹತ್ಯಾಕಾಂಡದ ಘಟನೆಗಳನ್ನು ಸಹಿಸದೆ ಹೋರಾಟದ ಬಾವುಟ ಹಾರಿಸಿದರು. ಗಾಂಧೀಜಿಯವರ ಸಂಧಾನಪರ ಧೋರಣೆಯಿಂದ ಬೇಸತ್ತು ಚಂದ್ರಶೇಖರ ಆಜಾದ್ ನೇತೃತ್ವದ ಕ್ರಾಂತಿಕಾರಿಗಳ ತಂಡವನ್ನು ಸೇರಿಕೊಂಡರು. ಸಾವು ಬೆನ್ನಿಗೆ ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಸಮರ ಸಾರಿದ ಅವರ ಪ್ರಸಂಗವನ್ನು ನೆನೆಸಿಕೊಂಡರೆ ಎದೆ ಝಲ್ ಎನ್ನುತ್ತದೆ. ಅಂತಹ ಮಹಾನ್ ನಾಯಕ ನಮಗೆಲ್ಲರಿಗೂ ಆದರ್ಶವಾದರೆ, ಭಾರತದಲ್ಲಿ ಮತ್ತೊಂದು ಸ್ವಾತಂತ್ರ್ಯ ಚಳುವಳಿ ಭುಗಿಲೇಳುತ್ತದೆ ಎಂದರು.

ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಷನ್ (ಎಐಡಿವೈಒ) ವಾಡಿ ಸಮಿತಿ ಕಾರ್ಯದರ್ಶಿ ಗೌತಮ್ ಪರ್ತೂರಕರ ಮಾತನಾಡಿ, ಬಾಲಕನಾಗಿದ್ದಾಗಲೇ ಭಗತ್ ಸಿಂಗ್ ಭಾರತ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಯುವಕರಾಗಿ ಕೆಚ್ಚೆದೆಯ ಕ್ರಾಂತಿಕಾರಿಯಾಗಿ ಹೊರಹೊಮ್ಮಿದರು. ದೇಶದ ಯುವಕರು ಅನ್ಯಾಯದ ವಿರುದ್ಧ ಹೋರಾಡಲು ಮುಂದಾಗಬೇಕು ಎಂಬುದು ಅವರ ಮುಖ್ಯ ಉದ್ದೇಶವಾಗಿತ್ತು. ಅಂತೆಯೇ ತಮ್ಮ ಇನ್ನಿಬ್ಬರು ಸಂಗಾತಿಗಳಾದ ರಾಜಗುರು ಹಾಗೂ ಸುಖದೇವ್ ಅವರೊಂದಿಗೆ ಗಲ್ಲುಗಂಬಕ್ಕೆ ಕೊರಳೊಡ್ಡಿ ಹುತಾತ್ಮರಾದರು. ಯುವಕರು ಭಗತ್ ಸಿಂಗ್ ಅವರನ್ನು ಆದರ್ಶ ನಾಯಕರಾಗಿ ಸ್ವೀಕರಿಸಬೇಕು ಎಂದರು.

ನಂದಿ ಬಸವೇಶ್ವರ ಶ್ರೇಯೋಭಿವೃದ್ಧಿ ಸಂಘದ ಖಜಾಂಚಿ ಶ್ರೀಶೈಲ ಪುರಾಣಿಕ ಅತಿಥಿಯಾಗಿದ್ದರು. ಸಂಘಟಕರಾದ ಶ್ರೀಶೈಲ ಕೆಂಚಗುಂಡಿ, ವಿಠ್ಠಲ್ ರಾಠೋಡ, ಬಸವರಾಜ ನಾಟೇಕರ್, ಜಾನು, ಅಶೋಕ ಮಾಳಗಿ, ಮೌನೇಶ ಯಕ್ಚಿಂತಿ, ಹುಸನಯ್ಯ ಗುತ್ತಿಗೆದಾರ ಹಾಗೂ ಮುಖಂಡರಾದ ಸಿದ್ದಯ್ಯ ಶಾಸ್ತ್ರಿ ನಂದೂರುಮಠ, ಕಾಳಪ್ಪ ಬಡಿಗೇರ, ರೇವಪ್ಪ ಅರಣಕಲ್, ಸೂಲಹಳ್ಳಿ, ಶರಬಣ್ಣ ಪೂಜಾರಿ, ಶಿವಕುಮಾರ, ಮಲ್ಲಿಕಾರ್ಜುನ, ಸಿದ್ದು ಚಟ್ನಳ್ಳಿ, ಆಕಾಶ, ಶ್ರೀಮಂತ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಎಐಡಿವೈಒ ಉಪಾಧ್ಯಕ್ಷ ರಾಜು ಒಡೆಯರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor