ಚಿತ್ತಾಪುರ | ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣ ಹಿಂಪಡೆಯಲು ಮನವಿ
ಚಿತ್ತಾಪುರ : ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲರೋಜ ಗ್ರಾಮದ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣವನ್ನು ಹಿಂಪಡೆದು ರದ್ದುಪಡಿಸಬೇಕು ಎಂದು ಆಗ್ರಹಿಸಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೇಗಲೇರಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು, ಸುಳ್ಳು ಪ್ರಕರಣ ದಾಖಲಿಸಿದವರ ವಿರುದ್ಧ ಹಾಗೂ ಅದಕ್ಕೆ ಪ್ರೋತ್ಸಾಹ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಬಾಲಕಿಯ ಹಾಗೂ ಕುಟುಂಬದ ಮಾನಹಾನಿ ಮಾಡಿದವರ ಮೇಲೂ ಕ್ರಮ ಜರುಗಿಸಬೇಕು ಎಂದು ಅವರು ಹೇಳಿದರು.
ಪ್ರತಿಭಟನೆ ವೇಳೆ ಮಾತನಾಡಿದ ನಾಯಕರು, ಮಹಲರೋಜ ಗ್ರಾಮದ ಮಲ್ಲಿಕಾರ್ಜುನ ಮುತ್ಯಾ ಭಕ್ತರ ಪಾಲಿನ ಆರಾಧ್ಯ ವ್ಯಕ್ತಿಯಾಗಿದ್ದಾರೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಅವರ ಮಠಕ್ಕೆ ಭೇಟಿ ನೀಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ಮಠಕ್ಕೆ ಬಂದಿದ್ದ ಬಾಲಕಿಗೆ ತಂದೆ ಮಕ್ಕಳಿಗೆ ತೋರುವ ಸಹಜ ಪ್ರೀತಿಯಷ್ಟೇ ತೋರಿಸಲಾಗಿದೆ ಎಂದು ಅವರು ತಿಳಿಸಿದರು.
ಪೋಕ್ಸೋ ಕಾಯ್ದೆಯ ವಿವಿಧ ವಿಧಿಗಳನ್ನು ಉಲ್ಲೇಖಿಸಿ, ಯಾವುದೇ ಸಮಗ್ರ ಪರಿಶೀಲನೆ ಇಲ್ಲದೆ ಎಫ್‌ಐಆರ್ ದಾಖಲಿಸಲಾಗಿದೆ. ಸಿಡಿಪಿಒ ಅವರನ್ನು ತಕ್ಷಣ ಅಮಾನತುಗೊಳಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಹಾಗೂ ಸಂಬಂಧಿತ ಪೊಲೀಸ್ ಠಾಣೆಯ ಠಾಣಾಧಿಕಾರಿಯ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಂತರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೋಲಿ ಸಮಾಜದ ಗೌರವಾಧ್ಯಕ್ಷ ರಾಮಲಿಂಗ ಬಾನಾರ್, ಕರಣಕುಮಾರ್ ಅಲ್ಲೂರ್, ಹಣಮಂತ ಸಂಕನೂರ್, ಮಲ್ಲಿಕಾರ್ಜುನ ಎಮ್ಮೇನೂರ್, ಭೀಮು ಹೊತಿನಮಡಿ, ರಾಜು ಹೋಳಿಕಟ್ಟಿ, ಮಲ್ಲಿಕಾರ್ಜುನ ಅಲ್ಲೂರಕರ್, ಸುರೇಶ ಬೆನಕನಳ್ಳಿ, ದೇವಿಂದ್ರ ಅಣಕಲ್, ಪ್ರಭು ಹಲಕಟ್ಟಿ, ಭಾಗಣ್ಣ ಹಲಕಟ್ಟಿ, ಮಹಿಪಾಲ್, ದಶರಥ ದೊಡ್ಮನಿ, ಗೂಳಿ ಡಿಗ್ಗಿ, ರಾಜು ಹುಲಿ, ಭೀಮು ಸೇರಿದಂತೆ ಅನೇಕ ಮುಖಂಡರು ಹಾಗೂ ಪದಾಧಿಕಾರಿಗಳು ಇದ್ದರು.