×
Ad

ಚಿತ್ತಾಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ

Update: 2025-07-31 13:59 IST

ಕಲಬುರಗಿ: ಸಾಮಂತಶಾಹಿ ಮತ್ತು ರಾಜ ಪ್ರಭುತ್ವ ವ್ಯವಸ್ಥೆಯ ವಿರುದ್ಧ ಪತ್ರಿಕೋದ್ಯಮ ಆರಂಭವಾಗಿದೆ ಎಂದು ರಾಯಚೂರಿನ ಪ್ರಗತಿಪರ ಚಿಂತಕರು ಹಾಗೂ ಉಪನ್ಯಾಸಕರಾದ ಡಾ. ಚಂದ್ರಗಿರೀಶ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ತಾಪುರ ತಾಲ್ಲೂಕು ಘಟಕದ ವತಿಯಿಂದ ಚಿತ್ತಾಪುರ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಪತ್ರಿಕೋದ್ಯಮ ಮತ್ತು ಸಾಮಾಜಿಕ ಬದಲಾವಣೆ ಅಥವಾ ಪ್ರಗತಿಯನ್ನು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಆದರೆ, ಆಗಿನ ಪತ್ರಿಕೋದ್ಯಮದ ಆಶಯ ಏನಿತ್ತು ಎನ್ನುವುದು. ಈಗಿನ ಪರಿಸ್ಥಿತಿ ಏನಿದೆ ಎಂದು ಅರ್ಥಮಾಡಿಕೊಳ್ಳುವುದು ಮುಖ್ಯ. ಈಗ ಆ ಪತ್ರಿಕೋದ್ಯಮ ಪ್ರಜಾಪ್ರಭುತ್ವದ 4ನೇ ಅಂಗವಾಗಿ ಉಳಿದಿದೆಯಾ ಎನ್ನುವುದು ಅವಲೋಕನ ಮಾಡಬೇಕಿದೆ ಎಂದರು.

ಸಾಮಾಜಿಕ ಮಾಧ್ಯಮ ಮತ್ತು ಯೂಟ್ಯೂಬ್ ಚಾನೆಲ್ ಮಾತ್ತು ವಿದ್ಯುನ್ಮಾನ ಮಾಧ್ಯಮದ ನಡುವೆ ಪತ್ರಿಕೆ ಉಳಿದಿದೆ ಎಂದರೆ ಅದು ತನ್ನ ಅಧಿಕೃತತೆಯಿಂದ ಎನ್ನುವುದು ಶ್ಲಾಘನೀಯ. ಪತ್ರಿಕೆಯಲ್ಲಿ ಸುದ್ದಿಗಳು, ಜಿಜ್ಞಾಸೆ, ಜನಮತ, ಕ್ರಿಡೆ, ಸಿನೆಮಾ, ಕಥೆ, ಕವನ, ಕಾದಂಬರಿ, ವೈಚಾರಿಕ ಲೇಖನಗಳು ಸೇರಿದಂತೆ ಎಲ್ಲಾ ತರಹದ ಸುದ್ದಿಗಳು ಪ್ರಕಟವಾಗುತ್ತವೆ. ಆದರೆ, ಸಂಬಳವಿಲ್ಲದೆ ದುಡಿಯುವ ಗ್ರಾಮೀಣ ಪತ್ರಕರ್ತರ ಗೌರವಧನ ಕೇಳಿದರೆ ಬೇಸರವಾಗುತ್ತವೆ ಎಂದು ಹೇಳಿದರು.

ಅಂಬೇಡ್ಕರ್ ಅವರು ಕಷ್ಟಪಟ್ಟು ಸಂವಿಧಾನ ಬರೆದುಕೊಟ್ಟರು. ಆದರೆ, ಅದು ಪೂರ್ಣವಾಗಿ ಜಾರಿಯಾಗಿಲ್ಲ. ರಾಜಕೀಯ ಪ್ರಾತಿನಿಧ್ಯ ಸ್ವಲ್ಪಮಟ್ಟಿಗೆ ಸಿಕ್ಕಿದೆ. ಆದರೆ, ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ ಇನ್ನೂ ಸಿಕ್ಕಿಲ್ಲ ಎನ್ನುವುದು ಎಲ್ಲರೂ ಒಪ್ಪಿಕೊಳ್ಳುವ ವಿಷಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷರಾದ ಬಾಬುರಾವ ಯಡ್ರಾಮಿ ಮಾತನಾಡಿ, ಪತ್ರಿಕೆ ಓದುವ ಖುಷಿ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವುದಿಲ್ಲ. ಡಿಜಿಟಲ್ ಮಾಧ್ಯಮವನ್ನು ಸಾಮಾಜಿಕ ಮಾಧ್ಯಮ ಎನ್ನುವುದು ಸರಿಯಾದ ಪದ ಅಲ್ಲ ಎಂದರು.

ಕೆಲವು ನ್ಯೂಸ್ ಚಾನಲ್ ಗಳು ಆರಂಭವಾದಾಗ ಪತ್ರಿಕೆಗಳು ನಿಂತೇ ಹೋಗುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ, ಓದುಗರ ಸಂಖ್ಯೆ ಹೆಚ್ಚುತ್ತಲೇ ಇವೆ. ಗ್ರಾಮೀಣ ಪತ್ರಕರ್ತರಿಗೆ ಸೌಲಭ್ಯಗಳ ಕೊರತೆಯಿದೆ. ಆದಾಗ್ಯೂ ಅತಿ ಹೆಚ್ಚು ಸುದ್ದಿ ಕೊಡುವವರೇ ಗ್ರಾಮೀಣ ಪತ್ರಕರ್ತರು ಎಂದರೆ ತಪ್ಪಾಗಲಾರದು. ಸರ್ಕಾರ ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ವಿತರಣೆಯ ಮಾನದಂಡ ಸಡಿಲಗೊಳಿಸುವ ಮೂಲಕ ಎಲ್ಲಾ ಪತ್ರಕರ್ತರಿಗೆ ಬಸ್ ಪಾಸ್ ಸಿಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಕೆಲವು ವಿದ್ಯುನ್ಮಾನ ಮಾಧ್ಯಮಗಳು ಬಂಡವಾಳಗಾರರ ಮಾಲಿಕತ್ವಕ್ಕೆ ಸಿಲುಕಿದ್ದು ನಿಜವಾಗಿದ್ದರೂ, ವಿಶೇಷವಾಗಿ ಮುದ್ರಣ ಮಾಧ್ಯಮ ಯಾವತ್ತು ತನ್ನ ಬದ್ದತೆ ಕಾಯ್ದುಕೊಂಡಿದೆ. ಆದರೆ, ಅತೀ ಶೀಗ್ರದಲ್ಲಿ ಸಿಗಲಿರುವ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಬರುವ ಎಲ್ಲಾ ಸುದ್ದಿಗಳು ನಿಜ ಇರುವುದಿಲ್ಲ ಎಂದರು.

ಶಹಾಬಾದ ಡಿವೈಎಸ್‌ಪಿ ಶಂಕರಗೌಡ ಪಾಟೀಲ ಮಾತನಾಡಿ, ಮುದ್ರಣ ಮಾಧ್ಯಮ ಬಿಟ್ಟು ವಿದ್ಯುನ್ಮಾನ ಮಾಧ್ಯಮಕ್ಕೆ ಹೋದವರು ಬ್ರೇಕಿಂಗ್ ನ್ಯೂಸ್ ಭರದಲ್ಲಿ ಬರವಣಿಗೆಯೂ ಆಗಲ್ಲ ಅವರಿಗೆ ಬದುಕಲು ಆಗುವುದಿಲ್ಲ. ಪತ್ರಿಕೆಗೆ ಮತ್ತು ಪತ್ರಕರ್ತನಿಗೆ ಖಚಿತತೆ ಮತ್ತು ಸ್ಪಷ್ಟತೆ ಇರಬೇಕು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಸುದ್ದಿ ತಲುಪಿಸುವ ಜೊತೆಗೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕು ಎಂದರು.

ಸ್ಥಳೀಯ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಜ ಎಸ್. ಮಲ್ಕಂಡಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಚಿತ್ತಾಪುರ ಪುರಸಭೆ ಅಧ್ಯಕ್ಷರಾದ ಅನ್ನಪೂರ್ಣ ನಾಗಪ್ಪ ಕಲ್ಲಕ್, ಭಾಜಪ ಚಿತ್ತಾಪುರ ಮಂಡಲ ಅಧ್ಯಕ್ಷರಾದ ರವಿಂದ್ರ ಸಜ್ಜನಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಶಿಧರ ಬಿರಾದಾರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹ್ಮದ್ ಅಕ್ರಂ ಪಾಷಾ ವೇದಿಕೆಯಲ್ಲಿದ್ದರು

ಈ ಸಂದರ್ಭದಲ್ಲಿ ವೀರೇಂದ್ರ ಕುಮಾರ ಕೊಲ್ಲೂರ, ಕಾಶಿನಾಥ ಗುತ್ತೇದಾರ, ಜಗದೇವ ಕುಂಬಾರ, ದಯಾನಂದ ಖಜೂರಿ, ಸಂತೋಷಕುಮಾರ ಕಟ್ಟಿಮನಿ, ಅನಂತನಾಗ ದೇಶಪಾಂಡೆ, ವಾಸುದೇವ ಚವ್ಹಾಣ, ಸೂರ್ಯಕಾಂತ ರದ್ದೇವಾಡಿ, ವೀರಣ್ಣ ಯಾರಿ, ಸಿದ್ದಯ್ಯಶಾಸ್ತ್ರೀ ನಂದೂರಮಠ, ರವಿಶಂಕರ ಬುರ್ಲಿ, ಚಂದ್ರಕಾಂತ ಬಳ್ಳಾ, ಲಕ್ಷ್ಮೀ ಕುಲಕರ್ಣಿ, ಸೀತಾ ಹೆರೂರು, ಮಂಜುಳಾ ಗುಡಬಾ, ಶೇಖ ಅಲ್ಲಾಭಕ್ಷ, ರವಿ ರಾಠೋಡ, ಅಣ್ಣರಾಯ ಮುಡಬೂಳ ಶಿವಕುಮಾರ ಕುಸಾಳೆ, ಸೇರಿದಂತೆ ಹಲವರಿದ್ದರು. ಜಗದೇವ ದಿಗ್ಗಾಂವಕರ ಸ್ವಾಗತಿಸಿದರು. ಮಡಿವಾಳಪ್ಪ ಹೆರೂರ ನಿರೂಪಿಸಿದರು. ರಾಯಪ್ಪ ಕೊಟಗಾರ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News