ಕಲಬುರಗಿ| ಸೈಬರ್ ಅಪರಾಧದ ಬಗ್ಗೆ ಜಾಗೃತಿ ವಹಿಸಿ: ಡಿವೈಎಸ್‌ಪಿ ಶಂಕರಗೌಡ ಪಾಟೀಲ್
ಕಲಬುರಗಿ(ಚಿತ್ತಾಪುರ): ಸೈಬರ್ ಅಪರಾಧ ಮತ್ತು ವಂಚನೆಗಳ ಬಗ್ಗೆ ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರು ಜಾಗೃತಿ ವಹಿಸಬೇಕು ಎಂದು ಡಿವೈಎಸ್‌ಪಿ ಶಂಕರಗೌಡ ಪಾಟೀಲ್ ಆಗ್ರಹಿಸಿದ್ದಾರೆ.
ಚಿತ್ತಾಪುರ ತಾಲೂಕಿನ ಮಾಡಬೂಳ ಕ್ರಾಸ್'ನಲ್ಲಿ ಮಾಡಬೂಳ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿವೈಎಸ್‌ಪಿ ಶಂಕರಗೌಡ ಪಾಟೀಲ್, ಸೈಬರ್ ವಂಚನೆಯನ್ನು ತಡೆಗಟ್ಟಲು ಕ್ಲಿಷ್ಟಕರವಾದ ಪಾಸ್‌ವರ್ಡ್ ಬಳಸಬೇಕು. ಅಪರಿಚಿತ ಲಿಂಕ್'ಗಳನ್ನು ಕ್ಲಿಕ್ ಮಾಡಬಾರದು. ಆ್ಯಂಟಿ ವೈರಸ್ ಸಾಫ್ಟ್‌ವೇರ್ ಅಳವಡಿಸಬೇಕು. ಆನ್'ಲೈನ್‌ನಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವಾಗ ಜಾಗರೂಕತೆ ವಹಿಸಬೇಕು ಎಂದು ಹೇಳಿದರು.
ವಾಹನಗಳ ಮಾಲಕರು ಮತ್ತು ಚಾಲಕರು ಕಡ್ಡಾಯವಾಗಿ ಡ್ರೈವಿಂಗ್ ಲೈಸನ್ಸ್, ಇನ್ಸುರೆನ್ಸ್ ಹೊಂದಿರಬೇಕು. ಸಂಚಾರಿ ನಿಯಮಗಳನ್ನು ಚಾಚು ತಪ್ಪದೆ ಪ್ರತಿಯೊಬ್ಬರು ಪಾಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಎಸ್'ಐಗಳಾದ ಗೌತಮ್, ಸಿದ್ಧಲಿಂಗ, ಎಎಸ್'ಐಗಳಾದ ಕಾಳಪ್ಪ, ಗುಂಡಪ್ಪ, ಹೇಡ್ ಕಾನ್ಸ್'ಟೇಬಲ್ ವೀರಶೆಟ್ಟಿ, ಗುರುಶಾಂತ, ಸಿಬ್ಬಂದಿಗಳಾದ ಚಂದ್ರಶೇಖರ, ಗಪೂರ್, ಪ್ರಶಾಂತ, ಮಾಳಗೊಂಡ, ಕೊಟ್ರೇಶ, ಸರೋಜಿನಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.