Kalaburagi | ವಿದ್ಯಾರ್ಥಿಗಳ ವಿರುದ್ಧ ಹಿಂಸೆಗೆ ಕರೆ ನೀಡಿದ ಟಿ.ಜಿ.ಮೋಹನ್‌ದಾಸ್ ಹೇಳಿಕೆ ಖಂಡನೀಯ: ಪದ್ಮಿನಿ ಕಿರಣಗಿ
ಕಲಬುರಗಿ: ಆರೆಸ್ಸೆಸ್ ನಾಯಕ ಟಿ.ಜಿ.ಮೋಹನ್‌ದಾಸ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪ್ರಚೋದನಕಾರಿ ಹಾಗೂ ಹಿಂಸೆಗೆ ಪ್ರೇರೇಪಿಸುವ ಹೇಳಿಕೆಗಳನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯೂಎ) ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷೆ ಪದ್ಮಿನಿ ಕಿರಣಗಿ ಅವರು, ಜಂತರ್ ಮಂತರ್ ಸುತ್ತ ಕರ್ಫ್ಯೂ ಜಾರಿಗೊಳಿಸಬೇಕು ಹಾಗೂ ಅಧಿಕಾರ ತಮ್ಮ ಕೈಯಲ್ಲಿದ್ದರೆ ಪ್ರತಿಭಟನೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲುತ್ತಿದ್ದೆ ಎಂಬ ಹೇಳಿಕೆಗಳು ಅತ್ಯಂತ ಖಂಡನೀಯವಾಗಿವೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸುವ ಜಾತ್ಯತೀತ ಮನೋಭಾವದ ಯುವತಿಯರ ಕುರಿತು ಅವಹೇಳನಕಾರಿ ಹಾಗೂ ಲೈಂಗಿಕ ಹಿಂಸೆಯನ್ನು ಸಮರ್ಥಿಸುವ ರೀತಿಯ ಹೇಳಿಕೆ ನೀಡಿರುವುದು ಮಹಿಳೆಯರ ಘನತೆಗೆ ಧಕ್ಕೆ ತರುವಂತದ್ದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಹೇಳಿಕೆಗಳು ಕೇವಲ ರಾಜಕೀಯ ಟೀಕೆಗಳಲ್ಲ; ಹಿಂಸೆಗೆ ನೇರ ಪ್ರಚೋದನೆ ನೀಡುವಂತಿದ್ದು, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರನ್ನೇ ದೂಷಿಸುವ ಮನೋಭಾವವನ್ನು ಉತ್ತೇಜಿಸುತ್ತವೆ ಎಂದು ಆರೋಪಿಸಿದ್ದಾರೆ.
ಶಾಂತಿಯುತ ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳ ವಿರುದ್ಧ ಹಿಂಸೆಗೆ ಕರೆ ನೀಡುವುದು ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕಿನ ಮೇಲಿನ ದಾಳಿಯಾಗಿದೆ. ಮಹಿಳೆಯರ ಕುರಿತು ಇಂತಹ ಅವಹೇಳನಕಾರಿ ಅಭಿಪ್ರಾಯಗಳು ಸಮಾಜದಲ್ಲಿ ಮಹಿಳಾ ವಿರೋಧಿ ಮನೋಭಾವವನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಈ ಹೇಳಿಕೆಗಳ ಕುರಿತು ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಟಿ.ಜಿ. ಮೋಹನ್‌ದಾಸ್ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಐಡಿಡಬ್ಲ್ಯೂಎ ಆಗ್ರಹಿಸಿದೆ.