ಸುರ್ಜೇವಾಲರ ಬಳಿ ಶಾಸಕರು ಹೇಳಿರುವ ಅಹವಾಲುಗಳನ್ನು ಸಿಎಂ ಬಹಿರಂಗ ಪಡಿಸಲಿ : ಎಂಎಲ್ಸಿ ಎನ್.ರವಿಕುಮಾರ್
ಕಲಬುರಗಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಧೈರ್ಯವಿದ್ದಲ್ಲಿ ಸುರ್ಜೇವಾಲರ ಬಳಿ ಶಾಸಕರು ಹೇಳಿರುವ ಅಹವಾಲುಗಳನ್ನು ಬಹಿರಂಗಪಡಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.
ನಗರದ ಐವನ್ ಶಾಹಿ ಅತಿಥಿ ಗೃಹದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಅವುಗಳನ್ನು ರಾಜ್ಯದ ಜನರ ಮುಂದೆ, ಮಾಧ್ಯಮಕ್ಕೆ ಬಿಡುಗಡೆ ಮಾಡಲಿ. ಆಗ ನಾವೇ ಬಿಜೆಪಿ ಪಕ್ಷದಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಸನ್ಮಾನ ಮಾಡುತ್ತೇವೆ ಎಂದು ಹೇಳಿದರು.
ಒಬ್ಬ ಕಾಂಟ್ರ್ಯಾಕ್ಟರ್ ಕೆಂಪಯ್ಯ ಬಿಜೆಪಿ ಆಡಳಿತದ ಅವಧಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿದ್ದಕ್ಕೆ, ಆಗ ಈಗೀನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆಗೆ ಆಗ್ರಹ ಮಾಡಿದ್ದರು. ಇದೀಗ ನಿಮ್ಮ ಪಕ್ಷದ ಶಾಸಕರೇ ಬಿ.ಆರ್.ಪಾಟೀಲ್, ರಾಜು ಕಾಗೇ, ಬಸವರಾಜ ರಾಯರೆಡ್ಡಿ ಸೇರಿದಂತೆ ಹಲವು ಶಾಸಕರು ದುಡ್ಡು ತಗೊಂಡು ಮನೆ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ. ನೀವು ಯಾವಾಗ ರಾಜೀನಾಮೆ ಕೊಡುತ್ತಿರಾ? ಎಂದು ಪ್ರಶ್ನಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಜಿಲ್ಲೆ ಡ್ರಗ್ಸ್ ಸಾಗಾಟದ ಅಡ್ಡೆಯಾಗಿ ಮಾರ್ಪಟ್ಟಿದೆ. ಸಾವಿರಾರು ಯುವಕರು ಮಾದಕ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದಕ್ಕೆ ನೇರ ಕಾರಣ ಇಲ್ಲಿಯ ಸಚಿವರು ಹಾಗೂ ಸರ್ಕಾರ. ಸಚಿವರ ಆಪ್ತ ಶಿಷ್ಯಂದಿರೇ ಈ ಡ್ರಗ್ಸ್ ಸಾಗಾಟ ಮಾಡುತ್ತಿದ್ದು, ಇವೆಲ್ಲವೂ ಎಷ್ಟು ದಿನಗಳಿಂದ ನಡೆಯುತ್ತಿದೆ ಎಂಬುದರ ಕುರಿತು ತನಿಖೆಯಾಗಬೇಕು ಎಂದು ಹೇಳಿದರು.
ಜಗತ್ತಿಗೆ ಬೋಧನೆ ಮಾಡುವ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಕ್ಷೇತ್ರದಲ್ಲಿ ಎನೂ ನಡೆಯುತ್ತಿದೆ ಒಮ್ಮೆ ನೋಡಿಕೊಳ್ಳಲಿ. ಜಿಲ್ಲೆಯಾದ್ಯಂತ ಡ್ರಗ್ಸ್ ದಂಧೆ, ಅಕ್ಕಿ ಕಳ್ಳತನ, ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಇವುಗಳನ್ನು ನಿಯಂತ್ರಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ ಸೇರಿದಂತೆ ಮತ್ತಿತರರು ಇದ್ದರು.