ರೈತರ ಹಿತ ಕಾಪಾಡುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿದೆ : ಆರ್.ಅಶೋಕ್ ವಾಗ್ಧಾಳಿ
ಕಲಬುರಗಿ : ರಾಜ್ಯದ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಕೋಮಾ ಸ್ಥಿತಿಯಲ್ಲಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರ್.ಅಶೋಕ್, ರಾಜ್ಯದಲ್ಲಿ ರೈತರು ಅತಿವೃಷ್ಟಿ, ಪ್ರವಾಹದಿಂದ ಸಂಕಷ್ಟದಲ್ಲಿದ್ದರೂ ಮುಖ್ಯಮಂತ್ರಿ, ಕಂದಾಯ ಸಚಿವರು ನಾಪತ್ತೆಯಾಗಿದ್ದಾರೆ. ಈವರೆಗೆ ಸ್ಥಳಕ್ಕೆ ಬಂದು ಭೇಟಿ ನೀಡಿ ವಾಸ್ತವವನ್ನು ಗಮನಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಕ್ಕೆ ಬಂದಾಗಿನಿಂದಲೂ ನಿತ್ಯವೂ ಐದು ವರ್ಷ ನಾನೇ ಸಿಎಂ, ನಾನೇ ಬಜೆಟ್ ಮಂಡಿಸುವುದು, ಮಾಧ್ಯಮದವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ, ಬಿಜೆಪಿಗೆ ಬುದ್ದಿ ಇಲ್ಲ ಎಂಬ ವರದಿಗಳೇ ಪತ್ರಿಕೆಗಳಲ್ಲಿ ಕಾಣುತ್ತಿವೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ದಿನಾಲೂ ದೇವಸ್ಥಾನಗಳನ್ನು ಸುತ್ತುವುದು, ಮತ್ತಿತರ ಜಪ ಮಾಡುವುದನ್ನೇ ಮುಂದುವರಿಸಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಯಾರು ಮುಖ್ಯಮಂತ್ರಿ ಎನ್ನುವ ಬಗ್ಗೆ ಜನರು ಗೊಂದಲದಲ್ಲಿದ್ದಾರೆ. ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿರುವ ಕಾಂಗ್ರೆಸ್ ಸರಕಾರದ ನಾಯಕರು, ರೈತರ ಗೋಳು ಕೇಳುತ್ತಿಲ್ಲ. ಹಾಗಾಗಿ ಬಿಜೆಪಿಯಿಂದಲೇ ರಾಜ್ಯಾದ್ಯಂತ ರೈತ ಪರ ಚಳುವಳಿ ನಡೆಸಲು ನಿರ್ಧರಿಸಲಾಗಿದ್ದು, ಡಿ.1 ಮತ್ತು 2ರಂದು ಜಿಲ್ಲಾ ಕೇಂದ್ರಗಳಲ್ಲಿ ರೈತರ ಪರ ಹೋರಾಟ ನಡೆಸಲು ರೂಪರೇಷೆ ಮಾಡಲಾಗಿದೆ ಎಂದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಕೈ ನಾಯಕರಲ್ಲಿ 3 ಗುಂಪುಗಳಾಗಿವೆ. ಸಿಎಂ, ಡಿಸಿಎಂ, ಲಿಂಗಾಯತ, ದಲಿತರು, ಲೆಕ್ಕಕ್ಕೆ ಇಲ್ಲ. ನನ್ನ ಬೆನ್ನ ಹಿಂದೆ ಎಷ್ಟು ಶಾಸಕರಿದ್ದಾರೆ ಎಂಬ ಬಲ ಪ್ರದರ್ಶನ ಜೋರಾಗಿ ನಡೆದಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರಂತು ಒಂದು ನಿರ್ಧಾರ ಕೈಗೊಳ್ಳದ ಪರಿಸ್ಥಿತಿಗೆ ಬಂದಿದ್ದಾರೆ. ಯಾಕೆಂದರೆ ಅವರಿಗೆ ಯಾವುದೇ ಅಧಿಕಾರ ಇಲ್ಲ ಎಂಬುದು ಅವರ ಮಾತುಗಳಿಂದ ಗೊತ್ತಾಗುತ್ತಿದೆ. ಕಾಂಗ್ರೆಸ್ ನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರ ಸರ್ವಾಧಿಕಾರವೇ ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷರಾದ ಖರ್ಗೆ ಅವರು ಸಿಎಂ ಬಗ್ಗೆ ನಿರ್ಧಾರ ಮಾಡುವಲ್ಲಿ ಅಸಹಾಯಕರಾಗಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಶಾಸಕರಾದ ಬಿ.ಜಿ ಪಾಟೀಲ್, ಬಸವರಾಜ ಮತ್ತಿಮಡು, ಶಶೀಲ್ ನಮೋಶಿ, ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ನಗರಾಧ್ಯಕ್ಷ ಚಂದು ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.