ಕಲಬುರಗಿಗೆ ರೈಲ್ವೆ ವಲಯ ಘೋಷಣೆ ಬೇಡಿಕೆ : ಜನರಲ್ಲಿ ನಿರಾಶೆ ಮೂಡಿಸಿದ ರೈಲ್ವೆ ಸಚಿವ ಸೋಮಣ್ಣ ಹೇಳಿಕೆ
ಕಲಬುರಗಿ: ಕಲಬುರಗಿಗೆ ರೈಲ್ವೆ ವಲಯ ಘೋಷಣೆಯಾಗಬೇಕೆನ್ನುವ ಕಲಬುರಗಿ ಜನರ ಪ್ರಮುಖ ಬೇಡಿಕೆ ಇನ್ನೂ ನಿರೀಕ್ಷೆಯಾಗಿಯೇ ಉಳಿದುಬಿಟ್ಟಿದೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಕಲಬುರಗಿ ರೈಲ್ವೆ ವಲಯ ಮಾಡಬೇಕೆಂದು ನನಗೂ ಆಸೆ ಇದೆ, ಇತ್ತೀಚೆಗೆ ಜಮ್ಮು ರೈಲ್ವೆ ವಲಯ ಮಾಡಲಾಗಿದೆ. ಅದಕ್ಕೂ ಕಲಬುರಗಿಗೆ ಹೋಲಿಕೆ ಮಾಡಬೇಡಿ. ಜಮ್ಮು ಬೇರೆ ಕಲಬುರಗಿ ಬೇರೆ ಎಂದು ಹೇಳಿದ್ದಾರೆ. ಸಚಿವರ ಹೇಳಿಕೆ ಈ ಭಾಗದ ಜನರ ದಶಕದ ನಿರೀಕ್ಷೆಯನ್ನು ಹುಸಿಯಾಗಿಸಿದೆ.
ಕಲಬುರಗಿ ರೈಲ್ವೆ ವಲಯ ಘೋಷಿಸಿ 43 ಎಕರೆ ಜಾಗ ಮತ್ತು 5 ಕೋಟಿ ಅನುದಾನ ಕೂಡ ಯುಪಿಎ ಸರಕಾರದ ಅವಧಿಯಲ್ಲಿ ರೈಲ್ವೆ ಸಚಿವ ಮಲ್ಲಿಕಾರ್ಜುನ್ ಖರ್ಗೆ ನೀಡಿದ್ದರು. ಈಗೇಕೆ ಆಗುತ್ತಿಲ್ಲ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಲಬುರಗಿಯನ್ನು ಖರ್ಗೆ ಅವರು ರೈಲ್ವೆ ವಿಭಾಗವನ್ನು ಮಾಡಲು ಹೊರಟಿದ್ದರು. ಅದಾದ ಬಳಿಕ ಏನೇನೋ ಆಯ್ತು. ಈ ಬಗ್ಗೆ ಅವರಿಗೆ ಕೇಳಬೇಕು ಎಂದು ಸೋಮಣ್ಣ ಹೇಳಿದರು.
2042ರ ವೇಳೆಗೆ 'ವಿಕಸಿತ ಭಾರತ' ಗುರಿಯನ್ನಿಟ್ಟುಕೊಂಡು ರೈಲ್ವೆ ಇಲಾಖೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿ, ದೊಡ್ಡ ಕಾಮಗಾರಿಗಳನ್ನು ಮುಗಿಸಲು ಯೋಜಿಸಲಾಗಿದೆ. ದೇಶದಲ್ಲಿ 50ಕ್ಕೂ ವಂದೇ ಭಾರತ್ ರೈಲ್ವೆಗಳು ಓಡಾಟಕ್ಕೆ ಸಿದ್ಧವಾಗಿವೆ. ರಾಜ್ಯದಲ್ಲಿ ಬೆಂಗಳೂರು - ಮಂಗಳೂರು, ಬೆಳಗಾವಿ, ಬೀದರ್ ಕಡೆಗಳಲ್ಲೂ ರೈಲುಗಳ ಓಡಾಟಕ್ಕೆ ಒತ್ತಾಯಗಳು ಕೇಳಿ ಬಂದಿವೆ. ಇವುಗಳನ್ನು ಹಂತ ಹಂತವಾಗಿ ಈಡೇರಿಸಲಿದ್ದೇವೆ. ಇದರ ಜೊತೆಯಲ್ಲೇ ಮುಂದಿನ ವರ್ಷದಲ್ಲಿ ಬುಲೆಟ್ ಟ್ರೈನ್‌ಗೂ ಕೂಡ ಚಾಲನೆ ನೀಡಲಿದ್ದೇವೆ ಎಂದು ಹೇಳಿದರು.
ಹಂತ ಹಂತವಾಗಿ ಹಳೆಯ ಸಾಮಾನ್ಯ ಬೋಗಿಗಳನ್ನು ತೆರವುಗೊಳಿಸಿ 10 ಸಾವಿರ ಹೊಸ ಬೋಗಿಗಳನ್ನು ಅಳವಡಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ನಮ್ಮ ರಾಜ್ಯದಲ್ಲೇ 1,700 ಕೋಟಿ ವೆಚ್ಚದಲ್ಲಿ 15 ಸಾವಿರ ಕಿಲೋ ಮೀಟರ್ ಸ್ವದೇಶಿ ನಿರ್ಮಿತ ಕವಚ್ ಎನ್ನುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದೇವೆ. ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ಕೋರಿದ್ದೆ, ಅದರ ಪರಿಣಾಮವಾಗಿ ಇಂದು ಕೇಂದ್ರ ಸರಕಾರ ಆಯಾ ಪ್ರದೇಶದ ಅಭ್ಯರ್ಥಿಗಳಿಗೆ ಪರೀಕ್ಷೆಗಳನ್ನು ಬರೆಯಲು 10 ಭಾಷೆಗಳಿಗೆ ಅವಕಾಶ ಕೊಟ್ಟಿದೆ. ಈಗಾಗಲೇ 65 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ದೇಶದಲ್ಲಿ 10 ವರ್ಷದಲ್ಲಿ 44 ಸಾವಿರ ಕಿಮೀ ಡಬ್ಲಿಂಗ್ ಮಾಡಿದ್ದೇವೆ. ಕೆಲವು ಸಾಲಿನಲ್ಲಿ ವಂದೇ ಭಾರತ್ ರೈಲು ಜಾರಿಗೆ ಮತ್ತು ವಿದ್ಯುತೀಕರಣ ಮಾಡಿದ ಹಿನ್ನೆಲೆಯಲ್ಲಿ 17 ರಿಂದ 18 ಸಾವಿರ ಕೋಟಿ ಉಳಿತಾಯವಾಗಿದೆ. ವಾಯು ಮಾಲಿನ್ಯ ಕಡಿಮೆಯಾಗಿದೆ. ಪ್ರಧಾನಿ ಘೋಷಿಸಿರುವ 300 ಅಮೃತ ಭಾರತ ಸ್ಟೇಶನ್ ಗಳಲ್ಲಿ ರಾಜ್ಯದಲ್ಲಿ 61 ಅಮೃತ ಭಾರತ ಸ್ಟೇಶನ್ ಪ್ರಾರಂಭವಾಗಿ ಕೆಲಸ ನಡೆಯುತ್ತಿವೆ ಎಂದು ತಿಳಿಸಿದರು.
ರೈಲ್ವೆ ಡಬ್ಲಿಂಗ್ ಕೆಲಸಕ್ಕಾಗಿ ಯುಪಿಎ ಸರಕಾರ ಇದ್ದಾಗ 2009 - 10ನೆಯ ಸಾಲಿನಲ್ಲಿ 11,500 ಕೋಟಿ ಖರ್ಚು ಮಾಡಿದ್ದಾರೆ. ನಾವು 2025 - 26ನೆಯ ಸಾಲಿನಲ್ಲಿ 70 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ರೈಲ್ವೆ ಅಭಿವೃದ್ಧಿಗೆ ನಮ್ಮ ಸರಕಾರ ಯುಪಿಎ ಸರ್ಕಾರಕ್ಕಿಂತ ದುಪ್ಪಟ್ಟು ಹಣ ಮೀಸಲಿಟ್ಟು, ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೋಲಾಪುರ ವಲಯದ ಡಿ.ಆರ್.ಎಂ ಸುಚಿತ್ ಮಿಶ್ರಾ, ಎಂಎಲ್‌ಸಿ ಶಶೀಲ್ ನಮೋಶಿ, ಶಾಸಕ ಬಸವರಾಜ್ ಮತ್ತಿಮಡು, ಅವಿನಾಶ್ ಜಾಧವ್, ಬಿ.ಜಿ.ಪಾಟೀಲ್, ರಾಜಕುಮಾರ್ ಪಾಟೀಲ್ ತೆಲ್ಕೂರ್, ಅಶೋಕ್ ಬಗಲಿ, ಉಮೇಶ್ ಜಾಧವ್, ದತ್ತಾತ್ರೇಯ ಪಾಟೀಲ್, ಸುಭಾಶ್ ಗುತ್ತೇದಾರ್, ಅಮರನಾಥ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.