×
Ad

ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರ ಮಾರಕ: ಸಚಿವ ಪ್ರಿಯಾಂಕ್ ಖರ್ಗೆ

Update: 2025-05-13 21:47 IST

ಕಲಬುರಗಿ: ಭಕ್ತಿ ವ್ಯಕ್ತಿಯ ಮೇಲೆ ಬಂದರೆ ಆತ ಸರ್ವಾಧಿಕಾರಿಯಾಗುತ್ತಾನೆ. ಅಂತಹ ಸರ್ವಾಧಿಕಾರ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ ಎಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂಸತ್ತಿನ ಕೊನೆಯ ಭಾಷಣದಲ್ಲಿ ಹೇಳಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ಡಾ ಬಿ.ಆರ್.‌ಅಂಬೇಡ್ಕರ್ ಅವರ ಪಂಚಲೋಹದ ಪ್ರತಿಮೆ‌ಯನ್ನು ಮಂಗಳವಾರ ಸಂಜೆ ಅನಾವರಣೆಗೊಳಿಸಿ ಅವರು ಮಾತನಾಡುತ್ತಿದ್ದರು.

ಇಂದಿನ ರಾಜಕಾರಣಿಗಳು ದೈವಿ ಸ್ವರೂಪರಾಗಿದ್ದೇವೆ. ವ್ಯಕ್ತಿಗಳ ವಿಜೃಂಭಣೆಯಾಗುತ್ತಿದೆ. ಅದು ಹಾಗಾಗಬಾರದು. ಸಂವಿಧಾನದ ಪ್ರಕಾರವೇ ಎಲ್ಲ ನಡೆಯಬೇಕು ಹೊರತು, ವ್ಯಕ್ತಿಯ ಇಚ್ಛೆಯಂತಲ್ಲ ಎಂದರು.

ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆಯಾಗದಂತೆ ತಿದ್ದುಪಡಿ ತರಲಾಗಿದೆ. ಸಾಮಾಜಿಕ ಹಾಗೂ ಆರ್ಥಿಕ‌ ನ್ಯಾಯ ಸಮಾನವಾಗಿ ಸಿಗಬೇಕು ಎನ್ನುವ ಆಶಯಕ್ಕೆ ಧಕ್ಕೆಯಾಗಿಲ್ಲ. ಆದರೆ, ಕೆಲ ದುಷ್ಠ ಸಿದ್ದಾಂತಗಳು ಬಸವ ಹಾಗೂ ಅಂಬೇಡ್ಕರ್ ಅವರ ಆಶಯಗಳ ವಿರುದ್ದ ನಡೆಯುತ್ತಿವೆ. ಅವುಗಳ ವಿರುದ್ಧ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇಂದು ಇದೆ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಸ್ವಾತಂತ್ರ್ಯ ನಂತರ ಸಂವಿಧಾನ ರಚನೆ ಮಾಡುವ ಹೊಣೆಗಾರಿಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಹೊರತುಪಡಿಸಿ ಬೇರೆಯವರಿಗೆ ವಹಿಸಿದ್ದರೆ ಬಹುಶಃ ಈ ದೇಶದಲ್ಲಿ ಪ್ರಜಾಪ್ರಭುತ್ವ ಇಷ್ಟೊಂದು ಗಟ್ಟಿಯಾಗಿರುತ್ತಿರಲಿಲ್ಲ ಎನ್ನುವ ಅನುಮಾನ ಮೂಡುತ್ತದೆ ಎಂದರು.

ಡಾ.ಅಂಬೇಡ್ಕರ್ ಅವರು ಓದಿಗೆ ತಕ್ಕಂತೆ ಯಾವುದಾದರು ವಿಶ್ವವಿದ್ಯಾಲಯದಲ್ಲಿ ಹುದ್ದೆ ಹೊಂದಬಹುದಿತ್ತು. ಆದರೆ, ಶೋಷಿತರ, ತುಳಿತಕ್ಕೊಳಗಾದವರ ಸಮಾನತೆ ಹಾಗೂ ಹಕ್ಕುಗಳಿಗಾಗಿ ತಮ್ಮ ಜೀವನ ಮುಡುಪಾಗಿಟ್ಟು ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಅವರು ಹೇಳಿದರು.

ಮೈಸೂರಿನ ಉರಿಲಿಂಗಿ ಪೆದ್ದಿ ಸಂಸ್ಥಾನ ಮಠದ ಜ್ಞಾನ ಪ್ರಕಾಶ ಸ್ವಾಮಿ ಮಾತನಾಡಿ, ತಾನು ಪ್ರತಿಮೆಯಲ್ಲಿ ಅಲ್ಲ, ಪುಸ್ತಕದಲ್ಲಿ ಜೀವಂತವಿರುವುದಾಗಿ ಡಾ. ಅಂಬೇಡ್ಕರ್ ಹೇಳಿದ್ದಾರೆ. ಪೆನ್ನಿನ ಮೂಲಕ ಬಾಬಾಸಾಹೇಬರು ಬದಲಾವಣೆ ತಂದಿದ್ದಾರೆ. ಹಾಗಾಗಿ, ಶಿಕ್ಷಣದ ಕಡೆಗೆ ಮುಖ ಮಾಡುವ ಮೂಲಕ ಮನೆ ಮನೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಹಾಗಾಗಿ, ಕೇವಲ ಪ್ರತಿಮೆ ಮಾಡುವುದರ ಬದಲು ಅಂಬೇಡ್ಕರ್ ಅವರ ವಿಚಾರಗಳನ್ನು ಜನರಿಗೆ ತಲುಪಿಸಿ ಎಂದು ಸಲಹೆ ನೀಡಿದರು.

ವೇದಿಕೆಯ ಮೇಲೆ ಸಮಾಜ ಮುಖಂಡರು, ಧಾರ್ಮಿಕ ಗುರುಗಳು ಸೇರಿದಂತೆ ಮತ್ತಿತರ ಮುಖಂಡರು ಇದ್ದರು.








 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News