×
Ad

ರೈತರ, ವಿಮೆ ಕಂಪೆನಿಯ ಸಮಕ್ಷಮದಲ್ಲಿ ಬೆಳೆ‌ ಕಟಾವು ಪ್ರಯೋಗ ನಡೆಯಲಿ: ಬಿ.ಫೌಝಿಯಾ ತರನ್ನುಮ್

Update: 2025-11-30 21:23 IST

ಕಲಬುರಗಿ: ವಿವಿಧ ಕೃಷಿ ಉತ್ಪನ್ನಗಳ ಇಳುವರಿ ನಿಖರ ಮಾಹಿತಿ ಸಂಗ್ರಹಣೆಗೆ ಪೂರಕವಾಗಿ ಆಯ್ದ ಗ್ರಾಮಗಳಲ್ಲಿ ನಡೆಯುವ ಬೆಳೆ ಕಟಾವು ಪ್ರಯೋಗದ ಸಂದರ್ಭದಲ್ಲಿ ಮೂಲ ಕಾರ್ಯಕರ್ತರು, ಮೇಲ್ವಿಚಾರಕರು, ರೈತರು ಮತ್ತು ವಿಮೆ‌ ಕಂಪೆನಿಗಳ ಪ್ರತಿನಿಧಿಗಳ ಸಮಕ್ಷಮದಲ್ಲಿ ಬೆಳೆ ಕಟಾವು ಪ್ರಯೋಗ ಮಾಡಬೇಕು ಎಂದು ಜಿಲ್ಲಾಧಿಕಾರಿ‌ ಬಿ.ಫೌಝಿಯಾ ತರನ್ನುಮ್ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇತ್ತೀಚೆಗೆ ಇಲ್ಲಿನ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಫೌಝಿಯಾ ತರನ್ನುಮ್, ಕೃಷಿ ಉತ್ಪನ್ನಗಳ ನಿಖರ ಇಳುವರಿ ಲಭ್ಯವಾದಲ್ಲಿ ಬೆಳೆ ಪರಿಹಾರ ಸೇರಿದಂತೆ ರೈತಾಪಿ ವರ್ಗಕ್ಕೆ‌ ಸವಲತ್ತು ಕಲ್ಪಿಸಲು ಸರಕಾರಕ್ಕೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಬೆಳೆ ಕಟಾವು ಪ್ರಯೋಗ ಕಾರ್ಯ ಮಹತ್ವದ್ದಾಗಿದೆ. ಇದರಲ್ಲಿ ಯಾವುದೇ ಲೋಪದೋಷವಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಕಟಾವು ಪ್ರಯೋಗಗಳನ್ನು ಕೈಗೊಳ್ಳುವಾಗ ಮೂಲ ಕಾರ್ಯಕರ್ತರು, ಹೊಲದ ರೈತರು, ಮೇಲ್ವಿಚಾರಕರು ಹಾಗೂ ವಿಮಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರುವಂತೆ‌ ನೋಡಿಕೊಳ್ಳಬೇಕು ಎಂದರು.  

ಜನನ-ಮರಣ ಪ್ರಕರಣಗಳಲ್ಲಿ 21 ದಿನಗಳಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಆಡಳಿತಾಧಿಕಾರಿ ಮತ್ತು ಪಂಚಾಯತ್ ಕಾರ್ಯದರ್ಶಿಗಳು ಕ್ರಮವಾಗಿ ನೋಂದಣಾಧಿಕಾರಿ ಮತ್ತು ಉಪ ನೋಂದಣಾಧಿಕಾರಿಯಾಗಿದ್ದು, ಪ್ರತಿಯೊಂದನ್ನು ನೋಂದಣಿ ಮಾಡಬೇಕು.‌ ಅದೇ ರೀತಿ ಪಟ್ಟಣ ಪ್ರದೇಶದಲ್ಲಿ‌ ಮುಖ್ಯಾಧಿಕಾರಿಗಳು ನೋಂದಣಿಕಾರಿಗಳಾಗಿದ್ದಾರೆ. ತಾಲೂಕಿನ ತಹಶೀಲ್ದಾರರು ಮತ್ತು ತಾಲೂಕು ಪಂಚಾಯತ್ ಇ.ಓ ಅವರು ಈ ಕುರಿತು ಹೆಚ್ಚಿನ ಜಾಗೃತಿ ಹಾಗೂ ಅರಿವು ಮೂಡಿಸಬೇಕೆಂದ ಜಿಲ್ಲಾಧಿಕಾರಿಗಳು, ಅಸ್ಪತ್ರೆಯಲ್ಲಿ ಹೆರಿಗೆಯಾದ ಪ್ರಕರಣದಲ್ಲಿ ಡಿಸ್ಚಾರ್ಜ್‌ ಮಾಡುವ ಮುನ್ನ ಉಚಿತ ಜನನ ಪ್ರಮಾಣ ಪತ್ರ ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ನಾಗನಗೌಡ ಭಾವಿ, ಜಿಲ್ಲಾ ಪಂಚಾಯತಿಯ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಮಧುಮತಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ.ಡಿ.ಇಮ್ರಾನ ಅಲಿ, ಸಹಾಯಕ ನಿರ್ದೇಶಕ ಶರಣಬಸವ, ಡಿ.ಎಚ್.ಓ‌ ಶರಣಬಸಪ್ಪ‌ ಕ್ಯಾತನಾಳ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News