×
Ad

ಕಲಬುರಗಿ: ಅರಿವು ಬಯಲು ಗ್ರಂಥಾಲಯಕ್ಕೆ ಪುಸ್ತಕಗಳ ಕಾಣಿಕೆ

Update: 2024-12-30 11:41 IST

ಕಲಬುರಗಿ: ನಗರದ ಎಸ್.ಎಂ.ಪಂಡಿತ ರಂಗಮಂದಿರ ಹತ್ತಿರ ಸ್ಥಾಪಿಸಲಾಗಿರುವ ಅರಿವು ಓಪನ್ ಏರ್ ಲೈಬ್ರರಿಗೆ ಹಿರಿಯ ಪತ್ರಕರ್ತ ಸುಭಾಷ ಬಣಗಾರ ಅವರು ತಮ್ಮ ಪುತ್ರ ವೀರೇಶ ಬಣಗಾರನ ಜನ್ಮದಿನದ ಅಂಗವಾಗಿ ಪ್ರಥಮ ಹಾಗೂ ದ್ವೀತಿಯ ಪಿ.ಯು.ಸಿ. ವಿಜ್ಞಾನ ವಿಷಯದ ಪುಸ್ತಕಗಳು, ನೀಟ್, ಸಿಇಟಿ ಸೇರಿದಂತೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಸುಮಾರು 8 ಸಾವಿರ ರೂ.ಮೌಲ್ಯದ ಪುಸ್ತಕಗಳನ್ನು ನೀಡಿದರು.

ಕಳೆದ 24 ವರ್ಷಗಳ ಹಿಂದೆಯೆ ಓದುವ ಹವ್ಯಾಸ ಹೆಚ್ಚಿಸುವ ಹಿನ್ನಲೆಯಲ್ಲಿ ಕಲಬುರಗಿ ನಗರದ ಸಾರ್ವಜನಿಕ ಉದ್ಯಾನವನದಲ್ಲಿ ತಮ್ಮ ವಿಭಿನ್ನ ಕಲ್ಪನೆಯೊಂದಿಗೆ ಪತ್ರಕರ್ತರ ಸಹಕಾರದೊಂದಿಗೆ ಸುಭಾಷ ಬಣಗಾರ್ ಅವರು ಆರಂಭಿಸಿರುವ ಬಯಲು ಗ್ರಂಥಾಲಯ ಇಂದು ಕರ್ನಾಟಕ ಮಾತ್ರವಲ್ಲದೆ ವಿವಿಧ ರಾಜ್ಯಗಳಲ್ಲೂ ಆರಂಭವಾಗುತ್ತಿರುವುದರಿಂದ ಇದೊಂದು ಮಾದರಿಯ ದೇಶದ ಮೊದಲ ಬಯಲು ಗ್ರಂಥಾಲಯ ಎಂಬ ಹೆಗ್ಗಳಿಕೆ ಪಡೆದುಕೊಳ್ಳುತ್ತಿದೆ.

ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರು, ಅರಿವು ಓಪನ್ ಏರ್ ಲೈಬ್ರರಿಯ ಸ್ಥಾಪಕರಾದ ಸಚಿನ್ ಶಿರವಾಳ ಅವರಿಗೆ ಪುಸ್ತಕಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಅವರು ಮಾತನಾಡಿ, ವಿಭಿನ್ನ ಕಲ್ಪನೆಯೊಂದಿಗೆ ಕಳೆದ 24 ವರ್ಷಗಳ ಹಿಂದೆ ಕಲಬುರಗಿಯ ಸಾರ್ವಜನಿಕ ಉದ್ಯಾನವನದಲ್ಲಿ ಹಿರಿಯ ಪತ್ರಕರ್ತ ಸುಭಾಷ ಬಣಗಾರ ಆರಂಭಿಸಲಾಗಿರುವ ಬಯಲು ಗ್ರಂಥಾಲಯ ಹಲವಾರು ಕಡೆ ಆರಂಭವಾಗುತ್ತಿರುವುದು ಶ್ಲಾಘನೀಯ ಎಂದರು.

ಮೊಬೈಲ್ ಹಾವಳಿಯಿಂದಾಗಿ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದ ಎಲ್ಲರ ಗಮನಕ್ಕೆ ಬರುತ್ತಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಕಡೆಯೂ ಬಯಲು ಗ್ರಂಥಾಲಯಗಳು ಪ್ರಾರಂಭವಾಗುತ್ತಿವೆ. ಸಾರ್ವಜನಿಕರು, ಅದರಲ್ಲೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಗ್ರಂಥಾಲಯಗಳ ಲಾಭ ಪಡೆದುಕೊಂಡು ಉತ್ತಮ ಶ್ರೇಣಿಯಲ್ಲಿ ಉತ್ತಿರ್ಣರಾಗಬೇಕೆಂದರು.

ಪುಸ್ತಕಗಳನ್ನು ಸ್ವೀಕರಿಸಿದ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಚಿನ್ ಶಿರವಾಳ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಹೆಚ್ಚಿಸುವ ಹಿನ್ನಲೆಯಲ್ಲಿ ಈ ಗ್ರಂಥಾಲಯ ಆರಂಭಿಸಲಾಗಿದೆ. ಇದನ್ನೂ ಇನ್ನೂ ಅಭಿವೃದ್ಧಿಪಡಿಸಲಾಗುತ್ತದೆ. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಬೇಕಾಗುವಂತಹ ಪಠ್ಯಪುಸ್ತಕಗಳನ್ನು, ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳನ್ನು ಇಲ್ಲಿ ಒದಗಿಸಲಾಗುತ್ತದೆ. ದಿನದ 24 ಗಂಟೆಗಳ ಕಾಲ ಪುಸ್ತಕಗಳು ಇಲ್ಲೆ ಇರುತ್ತವೆ. ಇವುಗಳ ಲಾಭ ಪಡೆಯಬೇಕೆಂದರು

ಹಿರಿಯ ಪತ್ರಕರ್ತರ, ಬಯಲು ಗ್ರಂಥಾಲಯದ ರೂವಾರಿ ಸುಭಾಷ ಬಣಗಾರ ಮಾತನಾಡಿ, 24 ವರ್ಷಗಳ ಹಿಂದೆ ಆರಂಭಿಸಲಾಗಿರುವ ಬಯಲು ಗ್ರಂಥಾಲಯ ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಲ್ಲೂ ಇದೇ ಮಾದರಿಯಲ್ಲಿ ಪ್ರಾರಂಭವಾಗುತ್ತಿರುವುದು ಈ ಬಯಲು ಗ್ರಂಥಾಲಯದ ಅಗತ್ಯತೆ ಹೆಚ್ಚು ಕಂಡು ಬರುತ್ತಿದೆ. ಮನೆಯಲ್ಲಿ ಮಕ್ಕಳು ಓದಿದಂತಹ ಹಾಗೂ ನಾವು ಓದಿದಂತಹ ಎಷ್ಟೋ ಪುಸ್ತಕಗಳು ಮೂಲೆಯಲ್ಲಿ ಧೂಳು ತಿನ್ನುತ್ತಾ ಬಿದ್ದಿರುತ್ತವೆ. ಅಮೂಲ್ಯವಾದ, ಎಲ್ಲರ ಜೀವನವನ್ನು ಬದಲಿಸಬಲ್ಲ ಎಷ್ಟೋ ಪುಸ್ತಕಗಳು ರದ್ದಿ ಸೇರುತ್ತವೆ. ಇಲ್ಲವೆ ಹಾಳಾಗುತ್ತವೆ. ಇದರ ಬದಲು ಇಂತಹ ಗ್ರಂಥಾಲಯದಲ್ಲಿ ತಂದು ಹಾಕುವುದರಿಂದ ಬೇರೊಬ್ಬರು ಓದಲು ಅವಕಾಶ ದೊರಕಿದಂತಾಗುತ್ತದೆ. ಅವರ ಜ್ಞಾನವೂ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೀರೇಶ ಬಣಗಾರ, ರಾಜು ಕೋಷ್ಠಿ, ಬಾಬುರಾವ್ ಕೋಬಾಳ್, ಸಂಗಪಾಲ್, ಗೌತಮ್ ಕರಿಕಲ್ ಸೇರಿದಂತೆ ಮತ್ತಿತರರು ಇದ್ದರು.

ಸಿಸಿ ಕ್ಯಾಮರಾ ಅಳವಡಿಕೆ

ಗ್ರಂಥಾಲಯದಲ್ಲಿನ ಪ್ರಮುಖ ಪುಸ್ತಕಗಳನ್ನು ಕೆಲ ವಿದ್ಯಾರ್ಥಿಗಳು ಓದುಲು ಮನೆಗೆ ತೇಗೆದುಕೊಂಡು ಹೋಗಿರುವುದಾಗಿ ಇಲ್ಲಿನ ಪುಸ್ತಕದಲ್ಲಿ ಬರೆದು, ತಮ್ಮ ಮೊಬೈಲ್ ನಂತರ ಹಾಕಿದ್ದಾರೆ. ಇನ್ನೂ ಕೆಲವರು ಹಾಗೆಯೇ ತೇಗೆದುಕೊಂಡು ಹೋಗಿದ್ದಾರೆ. ಯಾವುದೇ ಪುಸ್ತಕಗಳು ದುರುಪಯೋಗ ಆಗಬಾರದು. ಎಲ್ಲರಿಗೂ ಓದಲು ಸಿಗಬೇಕೆಂಬ ಹಿನ್ನಲೆಯಲ್ಲಿ ಸಿಸಿ ಕ್ಯಾಮರವನ್ನು ಅಳವಡಿಸಲಾಗಿದೆ. ಮುಂದೆ ಈ ಗ್ರಂಥಾಲಯ ನೋಡಿಕೊಳ್ಳಲು ಮೇಲ್ವಿಚಾರರ‍್ನು ನೇಮಿಸಲಾಗುತ್ತದೆ.

-ಸಚಿವ್ ಶಿರವಾಳ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News