×
Ad

ಭಾರತ ಇರುವವರೆಗೂ ಡಾ.ಅಂಬೇಡ್ಕರ್ ಅವರ ಹೆಸರು ಅಜರಾಮರ: ಶಾಸಕ ಎಂವೈ ಪಾಟೀಲ್

Update: 2025-12-06 23:20 IST

ಕಲಬುರಗಿ: ಸಂವಿಧಾನ ರಚನೆ ಮಾಡಲು ಡಾ.ಬಿ.ಆರ್ ಅಂಬೇಡ್ಕರ್ ಅವರು ಪಟ್ಟ ಶ್ರಮ ಅಸಾಧಾರಣವಾಗಿದೆ. ಭಾರತ  ಇರುವವರೆಗೆ ಬಾಬಾಸಾಹೇಬರ ಹೆಸರು ಅಜರಾಮರವಾಗಿರುತ್ತದೆ ಎಂದು ಅಫಜಲಪುರ ಶಾಸಕ ಎಂ.ವೈ ಪಾಟೀಲ್ ಹೇಳಿದ್ದಾರೆ.

ಅಫಜಲಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಉದ್ಯಾನವನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನದ ನಿಮಿತ್ತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಎಂ.ವೈ ಪಾಟೀಲ್, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಲವು ದೇಶಗಳನ್ನು ಸುತ್ತಿ ಆಯಾ ದೇಶದ ಸಂವಿಧಾನಗಳನ್ನು ಹಗಲು ರಾತ್ರಿಯೆನ್ನದೆ ಅಧ್ಯಯನ ಮಾಡಿ ತಮ್ಮ ಅನಾರೋಗ್ಯದ ನಡುವೆಯೂ ಮಹಾನ್ ಸಂವಿಧಾನ ಕೊಟ್ಟ ದೇಶಭಕ್ತ. ಇತ್ತೀಚೆಗೆ ಕೆಲವು ವ್ಯಕ್ತಿಗಳು ತಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾಯಿಸುವುದಕ್ಕಾಗಿ ಎಂದು ಹೇಳುತ್ತಿದ್ದಾರೆ. ಇಂಥ ಮಾತುಗಳು ಅಂಬೇಡ್ಕರರಿಗೆ ಬಗೆದ ದ್ರೋಹವಾಗಿದೆ ಎಂದು ಹೇಳಿದರು.  

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಮಾತನಾಡಿ, ಅಂಬೇಡ್ಕರ್ ಅವರ ದಿವ್ಯ ಬದುಕನ್ನು ನೆನಪಿಸುವ ಸ್ಮಾರಕ ಸದರಿ ಉದ್ಯಾನವನದಲ್ಲಿ ನಿರ್ಮಾಣವಾಗಬೇಕು. ಈ ಬಗ್ಗೆ ಶಾಸಕರು ಮುತುವರ್ಜಿ ವಹಿಸಿ ಅಂಬೇಡ್ಕರ್ ಅವರ ಸ್ಮರಣೆಯನ್ನು ಶಾಶ್ವತವಾಗಿ ಇರುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಅಫಜಲ್ಪುರ ತಾಲೂಕು ದಂಡಾಧಿಕಾರಿಗಳಾದ ಸಂಜೀವ್ ಕುಮಾರ್ ದಾಸರ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಉಸಿರಿರುವ ತನಕ ನಿರಂತರ ಅಧ್ಯಯನದಲ್ಲಿ ತೊಡಗಿದ್ದರು. ಇಂಥ ಜ್ಞಾನ ಸೂರ್ಯ ನನ್ನು ಪಡೆದ ನಾವೆಲ್ಲರೂ ಧನ್ಯರು ಎಂದು ಹೇಳಿದರು.

ಅಫಜಲಪುರ ಪಟ್ಟಣದ ವಿವಿಧ ದಲಿತ  ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವೀರಣ್ಣ, ಅಶೋಕ್ ನಾಯಕ, ಮಹಾನಾಯಕ ಅಂಬೇಡ್ಕರ್ ಸಂಘದ ಜಿಲ್ಲಾ ಅಧ್ಯಕ್ಷ ನಾಗೇಶ ಕೊಳ್ಳಿ, ತಾಲೂಕಿನ ದಲಿತ ಮುಖಂಡ ಭೀಮರಾಯ ಗೌರ್, ದಲಿತ ಸಂಘರ್ಷ ಸಮಿತಿಯ ಮುಖಂಡ ಮಹಾಂತೇಶ್ ಬಳಗುಂಡಿ , ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಳೆಂದ್ರ ಡಾಂಗೆ, ತಾಲೂಕು ಕಾಂಗ್ರೆಸ್ ಕಮಿಟಿ ಅಧ್ಯಕ್ಷ ರಮೇಶ್‌ ಪೂಜಾರಿ, ಆಶಾ ಕಿರಣ ಸ್ವಯಂ ಸೇವಾ ಸಮಿತಿಯ ಅಧ್ಯಕ್ಷೆ ಪ್ರಭಾವತಿ ಮೇತ್ರಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ್ ಚಂದಕೋಟೆ, ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಮಾದಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಿದ್ಧಾರ್ಥ ಬಸರಿಗಿಡ, ಪುರಸಭೆ ಮುಖ್ಯ ಅಧಿಕಾರಿ ಫಕ್ರುದ್ದೀನ್, ಅರವಿಂದ ದೊಡ್ಡಮನಿ, ರಾಜು ಬಬಲಾದ, ಸಂತೋಷ ಚಲವಾದಿ, ಪ್ರಕಾಶ್‌ ಬನ್ನಟ್ಟಿ ಮತ್ತು ಧಾನು ಪತಾಟೆ ರಾಜು ಅರೆಕರ್ ಉಪಸ್ಥಿತರಿದ್ದರು.

ರವಿ ಗೌರ ಕಾರ್ಯಕ್ರಮ ನಿರೂಪಣೆ ಮಾಡಿದರು. ಇದಕ್ಕೂ ಮೊದಲು ಶಾಸಕರಾದ ಎಂ.ವೈ. ಪಾಟೀಲ್ ಮತ್ತು ಇತರ ಅಂಬೇಡ್ಕರ್ ಅನುಯಾಯಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News