×
Ad

ವರ್ತಮಾನ ಬದುಕಿಗೆ ಅಂಬೇಡ್ಕರ್ ತತ್ವಗಳು ಪ್ರಸ್ತುತ: ಗೊಳ್ಳೆ ಶಿವಶರಣ

Update: 2025-09-02 20:55 IST

ಕಲಬುರಗಿ: ವರ್ತಮಾನದ ಬದುಕಿಗೆ ಬಾಬಾ ಸಾಹೇಬರ ತತ್ವಗಳು ಅತ್ಯಂತ ಪ್ರಸ್ತುತವಾಗಿವೆ. ಸ್ವಾತಂತ್ರ್ಯ ನಂತರ ಭಾರತದ ಮುಂದೆ ಬಹುದೊಡ್ಡ ಸವಾಲು ಇತ್ತು. ತಳವರ್ಗದಿಂದ ಬಡತನದಿಂದ ಬಂದ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಆ ಸವಾಲುಗಳಿಗೆ ಸೂಕ್ತ ಉತ್ತರ ನೀಡಿದ್ದಾರೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರಾದ ಗೊಳ್ಳೆ ಶಿವಶರಣ ಅವರು ಅಭಿಪ್ರಾಯಪಟ್ಟರು.

ಜೇವರ್ಗಿಯಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಬಿ.ಆರ್ ಅಂಬೇಡ್ಕರ್ ಸ್ಮರಣಾರ್ಥ ಸ್ಪರ್ಧಾಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ "21ನೇ ಶತಮಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳ ಪ್ರಸ್ತುತತೆ" ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಅಂಬೇಡ್ಕರ್ ಅವರಿಗೆ ಭಾರತದ ಮೇಲೆ ಅಪಾರವಾದ ಪ್ರೀತಿ, ಅಭಿಮಾನ, ಗೌರವ ಇತ್ತು. ಅವರು ಮನಸ್ಸು ಮಾಡಿದರೆ ವಿದೇಶದಲ್ಲಿ ಐಷಾರಾಮದ ಬದುಕನ್ನು ನಡೆಸಬಹುದಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಏಕೆಂದರೆ ಅವರಿಗೆ ಭಾರತದಲ್ಲಿ ಇರುವ ಬೌದ್ಧಿಕ ದಾರಿದ್ರ್ಯವನ್ನು ತೊಲಗಿಸುವ ಪರಮ ಉದ್ದೇಶವಿತ್ತುಎಂದು ಹೇಳಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಆಂಧ್ರಪ್ರದೇಶದ ಕೇಂದ್ರೀಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರದ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ರಾಮರೆಡ್ಡಿ ಮಾತನಾಡಿ, ಅಂಬೇಡ್ಕರ್ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಅವರ ತತ್ವಗಳ ಒಟ್ಟು ಸಾರ ಮಾನವೀಯತೆ ಆಗಿದೆ ಎಂದು ತಿಳಿಸಿದರು.

ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಪ್ರೊ. ಚಂದ್ರಕಾಂತ್ ಯಾತನೂರ ಅವರು ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾಂತಾ ಅಸ್ಟಿಗೆ ಅಧ್ಯಕ್ಷತೆ ವಹಿಸಿದ್ದರು.

ವಿಚಾರ ಸಂಕಿರಣದ ಸಂಯೋಜಕರಾದ ಭೀಮಣ್ಣ ಸ್ವಾಗತಿಸಿದರು. ಸಿಬ್ಬಂದಿ ಕಾರ್ಯದರ್ಶಿ ಡಾ. ಶರಣಪ್ಪ ಸೈದಾಪುರ್ ಅತಿಥಿಗಳನ್ನು ಪರಿಚಯಿಸಿ ದರು. ಜೇವರ್ಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶರಾದ ಸತೀಶಕುಮಾರ ಸಂಗನ್, ಐಕ್ಯೂಏಸಿ ಸಂಯೋಜಕರಾದ ಡಾ. ಸಂದೀಪ ತಿವಾರಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಭೀಮಣ್ಣನವರ ಸಂಪಾದಕತ್ವದ ಕಾಲೇಜು ಸ್ಮರಣ ಸಂಚಿಕೆ 'ಭೀಮೆಯ ಸಿರಿ ' ಬಿಡುಗಡೆಯಾಯಿತು. ಅಂಜಲಿ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಡಾ. ಖುತೇಜಾ ನಸ್ರಿನ್ ಮತ್ತು ಡಾ. ರಾಮುಲು ನಿರೂಪಿಸಿದರು. ಶಿಲ್ಪಾ ಜೆ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News