×
Ad

ಜೇವರ್ಗಿ ಪುರಸಭೆ ಅಧಿಕಾರಕ್ಕಾಗಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಮಧ್ಯೆ ಹೊಡೆದಾಟ

Update: 2025-02-12 23:28 IST

ಕಲಬುರಗಿ : ಜೇವರ್ಗಿ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ಗಲಾಟೆ ನಡೆದು, ಎರಡು ಪಕ್ಷದ ಕಾರ್ಯಕರ್ತರ ಮಧ್ಯೆ ಹೊಡೆದಾಟ ನಡೆದ ಘಟನೆ ಜೇವರ್ಗಿಯಲ್ಲಿ ನಡೆದಿದೆ.

23 ಸದಸ್ಯರ ಪುರಸಭೆಯಲ್ಲಿ 17 ಬಿಜೆಪಿ, 3 ಜೆಡಿಎಸ್, 3 ಕಾಂಗ್ರೆಸ್ ಗೆದ್ದಿತ್ತು. ಆದರೆ ಕೊನೆಗಳಿಗೆಯಲ್ಲಿ ಏಳಕ್ಕೂ ಅಧಿಕ ಸದಸ್ಯರು ಬಿಜೆಪಿಗೆ ಕೈಕೊಟ್ಟು ಜೆಡಿಎಸ್ಗೆ ಬೆಂಬಲ ನೀಡಿದ್ದರಿಂದ ಎರಡು ಪಕ್ಷದ ಕಾರ್ಯಕರ್ತರ ಮಧ್ಯೆ ಗಲಾಟೆ ಉಂಟಾಗಿ ಪೊಲೀಸರ ಎದುರೇ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ.

ಕೊನೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಜೇವರ್ಗಿ ಪುರಸಭೆ ಅಧ್ಯಕ್ಷರಾಗಿ ಗುರುಲಿಂಗಪ್ಪಗೌಡ ಮಾಲಿಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಗಂಗೂಬಾಯ್ ಸತ್ಕಾರ್ ಆಯ್ಕೆಯಾಗಿದ್ದಾರೆ.

ಬಿಜೆಪಿ ಪ್ರತಿಭಟನೆ:

ಕಾಂಗ್ರೆಸ್ ಸದಸ್ಯರನ್ನು ಪೊಲೀಸರು ಬಂಧಿಸಿ, ಕರೆದುಕೊಂಡು ಹೋಗಿ ನಮಗೆ ಹಿನ್ನೆಡೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್, ಬಿಜೆಪಿ ಗ್ರಾಮೀಣ ಅಧ್ಯಕ್ಷ ಅಶೋಕ್ ಬಗಲಿ, ರಾಜ್ಯ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ರೇವಣಸಿದ್ದಪ್ಪ ಸಂಕಾಲಿ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ನೂಕಾಟ, ತಳ್ಳಾಟವೂ ನಡೆಯಿತು.

ಜೆಡಿಎಸ್ ವಿಜಯೋತ್ಸವ :

ಜೆಡಿಎಸ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ವಿಜಯಪುರ ಕ್ರಾಸ್‍ನ ಬಸವೇಶ್ವರ್ ವೃತ್ತದ ಬಳಿ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಮುಖಂಡರಾದ ರಮೇಶ್ ಬಾಬು ವಕೀಲರು, ಶಿವಾನಂದ್ ದ್ಯಾಮಗೊಂಡ್, ಬಸವರಾಜ್ ಪಾಟೀಲ್ ನರಿಬೋಳ್, ಎಸ್.ಎಸ್. ಸಲಗರ್, ಬಸವರಾಜ್ ಪಾಟೀಲ್ ಅರಳಗುಂಡಗಿ, ಧರ್ಮರಾಜ್ ಜೋಗೂರ್, ಸಾಯಿಬಣ್ಣ ದೊಡ್ಮನಿ, ಬಸಲಿಂಗಪ್ಪ ವಸ್ತಾರಿ, ಶ್ರೀಶೈಲ್ ಕರಕಿಹಳ್ಳಿ, ಪುಂಡಲೀಕ್ ಗಾಯಕವಾಡ್, ಭೀಮಾಶಂಕರ್ ಹರನಾಳ್, ರುಕುಂ ಪಟೇಲ್, ನಾಡಗೌಡ್, ಶರಣು ಕೊಳಕೂರ್ ಮುಂತಾದವರು ಪಾಲ್ಗೊಂಡಿದ್ದರು.

ಪೊಲೀಸರಿಂದ ಬಲಪ್ರಯೋಗ ಆರೋಪ :

ಜೇವರ್ಗಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರಿಬ್ಬರು ಬಿಜೆಪಿಗೆ ಬೆಂಬಲ ನೀಡಿ ಮತ ಚಲಾಯಿಸಲು ಆಗಮಿಸುತ್ತಿದ್ದ ವೇಳೆ ಕಾಂಗ್ರೆಸ್ ಸದಸ್ಯರಾದ ಶಿವುಬಾಯಿ ಕೊಂಬಿನ್, ಮಮ್ತಾಜ್ ಬೇಗಂ ಇಬ್ಬರನ್ನು ಕಲಬುರಗಿ ಹೆಚ್ಚುವರಿ ಪೊಲೀಸ್ ಎಸ್ ಪಿ ಮಹೇಶ್ ಮೇಘಣ್ಣನವರ ವ್ಯಾನ್ ನಲ್ಲಿ ಕರೆದೊಯ್ದಿದ್ದಾರೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪ ಮಾಡಿದ್ದಾರೆ.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News