×
Ad

ಶಿರಪೂರ ನೀರಾವರಿ ಹೆಸರಿನಲ್ಲಿ 20 ಕೋಟಿ ರೂ. ಭ್ರಷ್ಟಾಚಾರ: ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್ ಆರೋಪ

Update: 2025-05-14 10:52 IST

ಕಲಬುರಗಿ : ಆಳಂದ ತಾಲೂಕಿನ ವಿವಿಧ ಗ್ರಾಮಗಳಾದ ಸರಸಂಬಾ, ನಾಗಲೇಗಾಂವ, ಸಕ್ಕರಗಾ, ಅಂಬೇವಾಡ, ಕಿಣಿ ಅಬ್ಬಾಸ, ಚಿಂಚೋಳಿ (ಕೆ), ಚಿಂಚೋಳಿ (ಬಿ) ಮತ್ತು ಸಾವಳೇಶ್ವರ ಗ್ರಾಮಗಳಲ್ಲಿ ಶಿರಪೂರ ಮಾದರಿಯ ನಾಲಾ ಹೂಳೆತ್ತುವುದು ಮತ್ತು ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳಲ್ಲಿ (4,702) ಭಾರೀ ಅವ್ಯವಹಾರ ನಡೆಯುತ್ತಿದ್ದು, ಗುತ್ತಿಗೆದಾರರು ಮತ್ತು ಇಂಜಿನಿಯರರು ಸೇರಿಕೊಂಡು ಇಪ್ಪತ್ತು ಕೋಟಿ ರೂ. ಲೂಟಿ ಮಾಡುತ್ತಿರುವುದನ್ನು ಕೂಡಲೇ ತಡೆ ಹಿಡಿದು ಸರಕಾರದ ನಿಯಮಗಳ ಪ್ರಕಾರ ತನಿಖೆ ಮಾಡುವಂತೆ ಮಾಜಿ ಶಾಸಕ ಸುಭಾಷ್ ಆರ್.ಗುತ್ತೇದಾರ್‌ ಆಗ್ರಹಿಸಿದ್ದಾರೆ.

ಮಂಗಳವಾರ ಕಲಬುರಗಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಳಂದ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾಗಿರುವ ಕಾಮಗಾರಿಗಳಾದ ಇಂಡೆಂಟ್ ನಂ. 1614- ಆಳಂದ ತಾಲೂಕಿನ ಸರಸಂಬಾ ಮತ್ತು ನಾಗಲೇಗಾಂವ ಗ್ರಾಮಗಳ ಹತ್ತಿರದ ನಾಲಾ ಹೂಳೆತ್ತುವುದು ಮತ್ತು ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಯು ಸಂಪೂರ್ಣ ಕಳಪೆ ಮಟ್ಟದಾಗಿದ್ದು, ಸರ್ಕಾರದ ನಿಯಮಗಳ ಪ್ರಕಾರ ಅಂದಾಜು ಪಟ್ಟಿಯಲ್ಲಿರುವಂತೆ ಕಾಮಗಾರಿ ಮಾಡಿರುವುದಿಲ್ಲ. ನಾಲಾ ಹೂಳೆತ್ತುವ ಕಾಮಗಾರಿಯು ಆಳ ಮತ್ತು ಅಗಲ ವಿಸ್ತೀರ್ಣ ಸುಳ್ಳು ದಾಖಲೆಗಳನ್ನು ತಯಾರಿಸಿ ಒಂಭತ್ತು ಕೋಟಿ ಎಂಭತ್ತು ಲಕ್ಷ ರೂ.ಗಳನ್ನು ಲೂಟಿ ಮಾಡುತ್ತಿರುವುದನ್ನು ಕೂಡಲೇ ತಡೆ ಹಿಡಿಯಬೇಕು. ಸುಳ್ಳು ಲೆಕ್ಕ ಬರೆದಿರುವ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮ್ಮೆ ಹೂಡಬೇಕು. ಕಂದಾಯ ಇಲಾಖೆಯಿಂದ ಮಾಹಿತಿ ತರಿಸಿಕೊಳ್ಳಬೇಕು. ಸರಸಂಬಾ ಮತ್ತು ನಾಗಲೇಗಾಂವ ಗ್ರಾಮಗಳಲ್ಲಿ ಎಷ್ಟು ಕೀಲೋ ಮೀಟರ್ ನಾಲಾ ಇದೆ ಎನ್ನುದನ್ನು ಮೊದಲು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಶಿರಪೂರ ಮಾದರಿಯಂತೆ ಎಂದು ಹೇಳಿ ಇಪ್ಪತ್ತು ಕೋಟಿ ರೂ. ಕಾಮಗಾರಿ ಮಾಡಿದ ಸ್ಥಳ ಯಾವುದು?. ಈಗ ಮಾಡುತ್ತಿರುವ ಸ್ಥಳ ಯಾವುದು?. ಈ ಹಿಂದಿನ ಲೆಕ್ಕ ತಪಾಸಣಾ ವರದಿ ( 2014-2015ರಲ್ಲಿ ಅಥವಾ 2016-2017ರಲ್ಲಿ) ತರಿಸಿಕೊಂಡು ಸ್ಥಳ ಪರಿಶೀಲಿಸಬೇಕು. ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಯು ಸಂಪೂರ್ಣ ಕಳಪೆ ಮಟ್ಟದಾಗಿ ನಿರ್ಮಿಸಿದ್ದು, ಅಂದಾಜು ಪಟ್ಟಿಯಲ್ಲಿರುವಂತೆ ಸಾಮಗ್ರಿಗಳನ್ನು ಬಳಸಿರುವುದಿಲ್ಲ. ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ ಹಣ ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.

ಇಂಡೆಂಟ್ ನಂ. 1615- ಆಳಂದ ತಾಲೂಕಿನ ಚಿಂಚೋಳಿ(ಕೆ) ಮತ್ತು ಚಿಂಚೋಳಿ(ಬಿ) ಗ್ರಾಮಗಳ ಹತ್ತಿರದ ನಾಲಾ ಹೂಳೆತ್ತುವುದು ಮತ್ತು ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಯಲ್ಲಿ ಭಾರೀ ಅಕ್ರಮ ನಡೆದಿದ್ದು 2014-2015 ಮತ್ತು 2015-2016ನೇ ಸಾಲಿನಲ್ಲಿ ಇದೇ ಗ್ರಾಮಗಳ ಇದೇ ನಾಲಾಗಳಲ್ಲಿ ಇದೇ ರೀತಿಯ ಕಾಮಗಾರಿ ಮಾಡಿ ಸರ್ಕಾರದ 20 ಕೋ. ರೂ. ಎತ್ತಿ ಹಾಕಿರುತ್ತಾರೆ. ಈಗ ಮತ್ತೆ ಅದೇ ಗ್ರಾಮಗಳಲ್ಲಿ ಒಂದೇ ರೀತಿಯ ಕಾಮಗಾರಿ ಮಾಡುತ್ತಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿರುತ್ತದೆ. ಅಲ್ಲದೇ ಮನರೇಗಾ ಕ್ರಿಯಾಯೋಜನೆಯಗಳಲ್ಲಿಯೂ ಕೂಡಾ ಪಡಸಾವಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಚಿಂಚೋಳಿ(ಕೆ), ಚಿಂಚೋಳಿ(ಬಿ) ಗ್ರಾಮಗಳಲ್ಲಿ ಇದೇ ನಾಲಾಗಳ ಹೂಳೆತ್ತುವ ಕಾಮಗಾರಿಗಳು ಇರುತ್ತವೆ. ಹಾಗಾದರೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಮಾಡಿರುವ ಕಾಮಗಾರಿ ಯಾವುದು?. ಶಿರಪೂರ ಮಾದರಿಯಲ್ಲಿ ಮಾಡುತ್ತಿರುವ ಕಾಮಗಾರಿ ಯಾವುದು?. ಇಲ್ಲಿ ಭಾರೀ ಅಕ್ರಮ ನಡೆದಿರುವುದು ಕಂಡು ಬರುತ್ತದೆ ಎಂದು ಸಂಶಯ ವ್ಯಕ್ತಪಡಿಸಿದರು.

ಇಂಡೆಂಟ್ ನಂ. 1616- ಆಳಂದ ತಾಲೂಕಿನ ಕಿಣಿ ಅಬ್ಬಾಸ, ಸಕ್ಕರಗಾ ಮತ್ತು ಅಂಬೆವಾಡ ಗ್ರಾಮಗಳಲ್ಲಿ ಶಿರಪೂರ ಮಾದರಿಯ ಚೆಕ್ ಡ್ಯಾಮ್ ನಿರ್ಮಾಣ ಮತ್ತು ನಾಲಾ ಹೂಳೆತ್ತುವ ಕಾಮಗಾರಿಗಳಿಗಾಗಿ 5 ಕೋಟಿ 96 ಲಕ್ಷ ರೂ. ಗಳು ಮಂಜೂರು ಆಗಿದ್ದು, ನರೇಗಾ ಯೋಜನೆ ಅಡಿಯಲ್ಲಿ ಪ್ರತಿ ವರ್ಷ ಪ್ರತಿ ಗ್ರಾಮಗಳಲ್ಲಿ ಸಾಮೂಹಿಕ ಕಾಮಗಾರಿ, ನಾಲಾ ಹೂಳೆತ್ತುವುದು ಮಂಜೂರು ಮಾಡಿದ್ದು ಕೂಲಿಕಾರರು ಕೆಲಸ ಮಾಡಿದ್ದಾರೆ. ಸರ್ಕಾರ ಅವರಿಗೆ ಕೂಲಿ ಮೊತ್ತ ನೀಡಿರುತ್ತದೆ ಎನ್‍ಎಂಎಂಎಸ್ ಆ್ಯಪ್ ಮುಖಾಂತರ ಫೋಟೊಗಳು ತೆಗೆಯಲಾಗಿದೆ. ಇಲ್ಲಿ ಅಂಬೆವಾಡ ಮತ್ತು ಕಿಣಿ ಅಬ್ಬಾಸ್ ಗ್ರಾಮಗಳು ಸಾವಳೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತವೆ. ಸಕ್ಕರಗಾ ಗ್ರಾಮವು ಸರಸಂಬಾ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುತ್ತದೆ. ಉದ್ಯೋಗ ಖಾತ್ರಿಯಲ್ಲಿ ಮಾಡಿದ ಚೆಕ್ ಡ್ಯಾಮ್ ಯಾವುದು?. ಉದ್ಯೋಗ ಖಾತ್ರಿಯಲ್ಲಿ ಹೂಳೆತ್ತಿದ ನಾಲಾ ಯಾವುದು?. ಕೃಷಿ ಇಲಾಖೆಯ ಜಲಾನಯನ ಕಾಮಗಾರಿಗಳಲ್ಲಿ ನಿರ್ಮಿಸಿದ ಚೆಕ್ ಡ್ಯಾಮ್‍ಗಳು ಯಾವುವು?. ಮತ್ತು ಪ್ರಸ್ತುತ ಶಿರಪೂರ ಮಾದರಿಯಲ್ಲಿ ನಾಲಾ ಹೂಳೆತ್ತುತ್ತಿರುವುದು ಯಾವುದು?. ಎಲ್ಲವೂ ಅನುಮಾನಕ್ಕೆ ಕಾರಣವಾಗಿವೆ ಎಂದು ಆರೋಪಿಸಿದರು.

ಇಂಡೆಂಟ್ ನಂ. 1722- ಆಳಂದ ತಾಲೂಕಿನ ಸಾವಳೇಶ್ವರ ಗ್ರಾಮದಲ್ಲಿ ಶಿರಪೂರ ಮಾದರಿಯಲ್ಲಿ ಚೆಕ್ ಡ್ಯಾಮ್ ನಿರ್ಮಾಣ ಮತ್ತು ಸಾವಳೇಶ್ವರ ಗ್ರಾಮದ ಹತ್ತಿರವಿರುವ ನಾಲಾ ಹೂಳೆತ್ತುವ ಕಾಮಗಾರಿಗಾಗಿ 1 ಕೋಟಿ 77 ಲಕ್ಷ ರೂ. ಮಂಜೂರಾಗಿರುತ್ತದೆ. ಆದರೆ ಅಂದಾಜು ಪಟ್ಟಿಯಲ್ಲಿರುವಂತೆ ಕಾಮಗಾರಿ ಮಾಡಿರುವುದಿಲ್ಲ. ಆದರೆ ಸುಳ್ಳು ಲೆಕ್ಕ ತೋರಿಸಿ ಶಾಸಕರ ಅಣ್ಣನ ಮಗನಾದ ಆರ್ ಕೆ ಪಾಟೀಲ ಬೋಗಸ್ ಬಿಲ್ಲುಗಳನ್ನು ತಯಾರಿಸಿ  20 ಕೊ. ರೂ. ಗಳನ್ನು ಲೂಟಿ ಮಾಡಿರುತ್ತಾರೆ. ಇದೇ ಕಾಮಗಾರಿಗಾಗಿ ಈ ಹಿಂದೆ ಶಿರಪೂರ ಮಾದರಿ ಹೆಸರಿನಲ್ಲಿ 20 ಕೋಟಿ ರೂ. ಲೂಟಿ ಮಾಡಿರುತ್ತಾರೆ. ಈಗ ಮತ್ತೆ ಅದೇ ಗ್ರಾಮಗಳಲ್ಲಿ ಅದೇ ನಾಲಾಗಳಲ್ಲಿ ಹೂಳೆತ್ತಿರುವುದಾಗಿ ಸುಳ್ಳು ದಾಖಲೆಗಳನ್ನು ತಯಾರಿಸಿ ಸರ್ಕಾರದ ಹಣ ಲೂಟಿ ಮಾಡಿರುತ್ತಾರೆ ಎಂದು ಆರೋಪಿಸಿದರು.

ಒಂದು ಕೆರೆ ಕಟ್ಟಿಸಿದರೆ ನೂರಾರು ವರ್ಷ ಉಳಿತಿತ್ತು. ಆಳಂದ ತಾಲೂಕಿನ ಕವಲಗಾ ಗ್ರಾಮದಲ್ಲಿ ಕೆರೆ ನಿರ್ಮಾಣಕ್ಕಾಗಿ ರೂಪಾಯಿ 16 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಬಿ ಆರ್ ಪಾಟೀಲ್ ಮತ್ತು ಆರ್ ಕೆ ಪಾಟೀಲರು ಈ ಹಣ ಲೂಟಿ ಮಾಡಲೆಂದು ಕವಲಗಾ ಕೆರೆಗೆ ಮಂಜೂರಾದ ಹಣವನ್ನು ಕಾಮಗಾರಿ ಬದಲಾವಣೆ ಮಾಡಿ ನಾಲಾ ಹೂಳೆತ್ತುವಂತೆ ನಾಟಕವಾಡಿ ಸರ್ಕಾರದ 20 ಕೋಟಿ ರೂ. ಹಣ ಹಗಲು ದರೋಡೆ ಮಾಡಿರುತ್ತಾರೆ. ಅದರಂತೆ ಧಂಗಾಪೂರ ಕೆರೆ ಅಭಿವೃದ್ಧಿಗೆ 50 ಲಕ್ಷ, ತಡೋಳಾ ಜಿನುಗು ಕೆರೆ ಅಭಿವೃದ್ಧಿಗೆ 50 ಲಕ್ಷ ಮತ್ತು ವೈಜಾಪೂರ ಕೆರೆ ಅಭಿವೃದ್ಧಿಗೆ 78 ಲಕ್ಷ ಒಟ್ಟು ಒಟ್ಟು 178. 47 ಲಕ್ಷ ಅನುದಾನ ಮೀಸಲಿಡಲಾಗಿತ್ತು. ಈ ಕೆರೆಗಳು ಅಭಿವೃದ್ಧಿ ಆಗಿದ್ದರೆ ನೂರಾರು ವರ್ಷ ನೀರು ನಿಲ್ಲಿಸಬಹುದಾಗಿತ್ತು. ಆದರೆ ಬಿ ಆರ್ ಪಾಟೀಲ್ ಮತ್ತು ಆರ್ ಕೆ ಪಾಟೀಲರು ಸರ್ಕಾರದ ಹಣ ಲೂಟಿ ಮಾಡಲೆಂದು ಕಾಮಗಾರಿ ಬದಲಾವಣೆ ಮಾಡಿ ಸಾವಳೇಶ್ವರ ಗ್ರಾಮದಲ್ಲಿ ನಾಲಾ ಹೂಳೆತ್ತುವ ಹೆಸರಿನಿಂದ ಒಟ್ಟು 1.78 ಕೋ. ರೂ. ಲಪಟಾಯಿಸಿಲೆಂದೇ ಧಂಗಾಪೂರ, ತಡೋಳಾ ಮತ್ತು ವೈಜಾಪೂರ ಕೆರೆಗಳ ಅಭಿವೃದ್ಧಿಗಾಗಿ ಮಂಜೂರಾಗಿರುವುದನ್ನು ಬದಲಾವಣೆ ಮಾಡಿರುತ್ತಾರೆ ಎಂದು ದೂರಿದರು.

ಸರ್ಕಾರದ ನಿಯಮಾವಳಿಗಳ ಪ್ರಕಾರ ಅಂದಾಜು ಪಟ್ಟಿಯಲ್ಲಿರುವಂತೆ ಕಾಮಗಾರಿಯನ್ನು ಸಂಪೂರ್ಣ ತನಿಖೆ ಮಾಡಬೇಕು. ಅದಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ತನಿಖಾ ತಂಡ ರಚಿಸಬೇಕು. ಅಲ್ಲಿಯವರೆಗೆ ಬಿಲ್ಲುಗಳನ್ನು ತಡೆ ಹಿಡಿಯಬೇಕು. ಎಲ್ಲಾ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿಯಲ್ಲಿ ಮಾಡಿರುವ ನಾಲಾ ಹೂಳೆತ್ತುವ ಕಾಮಗಾರಿಗಳು ಇಲ್ಲಿ ಪುನರಾವರ್ತನೆಯಾಗಿರುವುದನ್ನು ತಾಳೆ ಮಾಡಿ ಎರಡು ಕಡೆ ಸರ್ಕಾರದ ಹಣ ಪೋಲಾಗುವುದನ್ನು ತಡೆ ಹಿಡಿಯಬೇಕು.

ತಪ್ಪು ಮಾಡಿರುವ, ಸುಳ್ಳು ದಾಖಲೆಗಳನ್ನು ತಯಾರಿಸಿರುವ ಮತ್ತು ಇದಕ್ಕೆ ಸಹಕರಿಸಿರುವ ಮೇಲಾಧಿಕಾರಿಗಳ ವಿರುದ್ಧ ಉಗ್ರ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿ ಕೊಡಬೇಕು ಇಲ್ಲದಿದ್ದರೇ ವಿಭಾಗೀಯ ಕಚೇರಿಯ ಮುಂದೆ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಆಳಂದ ಮಂಡಲ ಮಾಜಿ ಅಧ್ಯಕ್ಷ ಆನಂದರಾವ ಪಾಟೀಲ ಕೋರಳ್ಳಿ, ಪುರಸಭೆ ಸದಸ್ಯ ಶಿವಪುತ್ರ ನಡಗೇರಿ, ಜಿಲ್ಲಾ ಬಿಜೆಪಿ ಮುಖಂಡ ಸಂತೋಷ ಹಾದಿಮನಿ ಇದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News