×
Ad

ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆಯಲ್ಲಿ ಅಕ್ರಮಕ್ಕೆ ಯತ್ನ: ತನಿಖೆಗೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಆಗ್ರಹ

Update: 2025-12-04 22:26 IST

ಕಲಬುರಗಿ: ಆಳಂದ ತಾಲೂಕಿನ ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆ ಗೊಂದಲದ ಗೂಡಾಗಿದೆ. ಚುನಾವಣಾ ಅಧಿಕಾರಿಗಳು ಒಂದು ಪಕ್ಷದ ಪ್ರತಿನಿಧಿಯಂತೆ ನಡೆದುಕೊಂಡಿದ್ದಾರೆ. ಉದ್ದೇಶಪೂರ್ವಕವಾಗಿ ಒಂದು ಗುಂಪಿಗೆ ಸಹಾಯ ಮಾಡಲು ಚುನಾವಣಾ ಅಕ್ರಮ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆಳಂದ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ್‌ ಆರೋಪಿಸಿದ್ದಾರೆ.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ರೈತರೊಂದಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸುಭಾಷ್ ಆರ್ ಗುತ್ತೇದಾರ್‌, ಬುಧವಾರ ನಡೆದಿದ್ದ ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಉದ್ದೇಶಪೂರ್ವಕವಾಗಿ ನಕಲಿ ಮತಪತ್ರಗಳು ಹಂಚುವ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದು, ಬೂತ್ ಕ್ರ. 01 ರಲ್ಲಿರುವ 350 ಮತದಾರರಲ್ಲಿ ಗರಿಷ್ಠ ಮತದಾರರು ಆಡಳಿತ ಪಕ್ಷದ ಶಾಸಕರ ಬೆಂಬಲಿತ ಪ್ಯಾನೆಲ್ ವಿರುದ್ದ ಮತ ಚಲಾವಣೆ ಮಾಡುವವರಿದ್ದರಿಂದ ಶಾಸಕರ ಒತ್ತಡದಿಂದ ಚುನಾವಣಾಧಿಕಾರಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು. ಮತದಾರ ಪಟ್ಟಿಯಲ್ಲಿ ಅಕ್ರಮ ನಡೆಸಲು ಯತ್ನಿಸಿದ ಸಕ್ಕರೆ ಕಾರ್ಖಾನೆ ಸಂಜು ಕರ್ಪೂರ, ಮೇಲ್ವಿಚಾರಕ ಶಿವಾನಂದ ಅಷ್ಟಗಿ ನೇರವಾಗಿ ಭಾಗಿಯಾಗಿದ್ದಾರೆ ಅವರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಚಂದ್ರಶೇಖರ್‌ ಹಿರೇಮಠ ಮಾತನಾಡಿ, ಮತದಾರರನ್ನು ದಿಕ್ಕು ತಪ್ಪಿಸಲು ಚುನಾವಣಾಧಿಕಾರಿಗಳು ಉದ್ದೇಶಪೂರ್ವಕವಾಗಿ ಜನತಾ ಬಜಾರ ಚುನಾವಣೆಯ ಬ್ಯಾಲೆಟ್ ಪೇಪರ ಬಳಸಿದ್ದಾರೆ. ಮತಪತ್ರ ಬದಲಾವಣೆಯಲ್ಲಿ ಭಾಗಿಯಾದ ಚುನಾವಣಾ ಅಧಿಕಾರಿಯನ್ನು ಬಂಧಿಸಿ ಚುನಾವಣಾ ಅಕ್ರಮಕ್ಕೆ ಪಿತೂರಿ ಮಾಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.

ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ ಮಾತನಾಡಿ, ಸಕ್ಕರೆ ಕಾರ್ಖಾನೆ ಆವರಣದಲ್ಲಿಯೇ ಚುನಾವಣೆ ನಡೆಸಬೇಕು. ಕಲಬುರಗಿಯಲ್ಲಿರುವ ಸಕ್ಕರೆ ಕಾರ್ಖಾನೆಯ ಕಾರ್ಯಾಲಯ ಕಾರ್ಖಾನೆ ಆವರಣದಲ್ಲಿ ಪ್ರಾರಂಭಿಸಬೇಕು. ಮತದಾರರ ಪಟ್ಟಿ ಮರು ಪರಿಶೀಲನೆ ಆಗಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಕಾಲಾವಕಾಶ ಕೊಡಬೇಕು. ರೈತರು ತಮ್ಮ ಶೇರು ಮೌಲ್ಯದ ವ್ಯತ್ಯಾಸ ಹಣ ಭರಿಸಿದ್ದು, ಅಂತಹ ರೈತರಿಗೆ ಮತದಾನದ ಹಕ್ಕನ್ನು ಕೊಡಬೇಕು. ಚುನಾವಣೆ ಪ್ರಕ್ರಿಯೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಬೇಕು. ಮತದಾರರ ಪಟ್ಟಿಯಲ್ಲಿ ಆಗಿರುವ ಅಕ್ರಮದ ಕುರಿತು ತನಿಖೆ ಆಗಬೇಕು ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಅಶೋಕ ಬಗಲಿ, ಧರ್ಮಣ್ಣಾ ಇಟಗಾ, ಅವ್ವಣ್ಣಾ ಮ್ಯಾಕೇರಿ, ವೀರಣ್ಣಾ ಮಂಗಾಣೆ, ಅಣ್ಣಾರಾವ ಪಾಟೀಲ್‌ ಕವಲಗಾ, ಬಾಬುಗೌಡ ಪಾಟೀಲ್‌, ಚಂದ್ರಕಾoತ ಭೂಸನೂರ, ಶಿವಪ್ಪ ವಾರಿಕ, ಬಸವರಾಜ ಬಿರಾದಾರ, ಸಂತೋ ಹಾದಿಮನಿ, ಸಿ ಕೆ ಪಾಟೀಲ, ಆನಂದರಾವ ಗಾಯಕವಾಡ, ಶರಣಪ್ಪ ನಾಟೀಕಾರ, ಶಾಂತಕುಮಾರ ಪರೀಟ, ವಿಜಯಕುಮಾರ ಹುಲಸೂರೆ, ಅಶೋಕ ಗುತ್ತೇದಾರ, ಮಲ್ಲಣ್ಣಾ ನಾಗೂರೆ, ಸುನೀತಾ ಪೂಜಾರಿ, ಗೌರಿ ಚಿಚಕೋಟಿ, ಮಲ್ಲಿಕಾರ್ಜುನ ಕಂದಗೂಳೆ, ಪ್ರಕಾಶ ಮಾನೆ, ಸೀತಾರಾಮ ಜಮಾದಾರ, ಸುನೀಲ ಹಿರೋಳಿಕರ, ನಾಗರಾಜ ಶೇಗಜಿ, ಗುಂಡಪ್ಪ ಪೂಜಾರಿ, ರವಿ ಮದನಕರ, ಶಿವಪ್ರಕಾಶ ಹೀರಾ, ಶರಣಗೌಡ ಪಾಟೀಲ ದೇವಂತಗಿ, ರುದ್ರಯ್ಯ ಸ್ವಾಮಿ, ಅಶೋಕ ಹತ್ತರಕಿ, ರಮೇಶ ಬಿರಾದರ, ಎಂ ಎಸ್ ಪಾಟೀಲ, ಪ್ರಕಾಶ ಸಣಮನಿ, ಮಹೇಶ ಗೌಳಿ, ಈರಣ್ಣಾ ಮೇತ್ರೆ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News