ಕಲಬುರಗಿಯಲ್ಲಿ ‘ಲೀಪ್ ಗ್ರೋತ್ ಲ್ಯಾಬ್’ ಸ್ಥಾಪನೆಗೆ ಉಚಿತ ಭೂಮಿ ಮಂಜೂರು : ಸಚಿವ ಪ್ರಿಯಾಂಕ್ ಖರ್ಗೆ
ನಾವೀನ್ಯತೆ, ಸಂಶೋಧನೆ ಮತ್ತು ಉದ್ಯಮಶೀಲತೆಗೆ ಉತ್ತೇಜನ
ಬೆಂಗಳೂರು/ಕಲಬುರಗಿ: ಕರ್ನಾಟಕದಲ್ಲಿ ನಾವೀನ್ಯತೆ, ತಂತ್ರಜ್ಞಾನ ಆಧಾರಿತ ಸಂಶೋಧನೆ ಹಾಗೂ ಉದ್ಯಮಶೀಲತೆಯನ್ನು ರಾಜ್ಯದ ಎಲ್ಲ ಭಾಗಗಳಿಗೂ ವಿಸ್ತರಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ‘ಲೀಪ್ ಗ್ರೋತ್ ಲ್ಯಾಬ್’ (LEAP Growth Lab) ಯೋಜನೆಯಡಿ ಕಲಬುರಗಿಯಲ್ಲಿ ನಾವೀನ್ಯತಾ ಕೇಂದ್ರ ಸ್ಥಾಪಿಸಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಈ ಕೇಂದ್ರ ಸ್ಥಾಪನೆಗಾಗಿ ಕಲಬುರಗಿಯ ಅಕ್ಕಮಹಾದೇವಿ ಬಡಾವಣೆಯಲ್ಲಿ ಕರ್ನಾಟಕ ಗೃಹ ಮಂಡಳಿಯು ಉಚಿತವಾಗಿ ಭೂಮಿ ಮಂಜೂರು ಮಾಡಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಯುವಜನರಲ್ಲಿ ಅಡಗಿರುವ ನಾವೀನ್ಯಪೂರ್ಣ ಆಲೋಚನೆಗಳು, ಸಂಶೋಧನಾ ಸಾಮರ್ಥ್ಯ ಮತ್ತು ಉದ್ಯಮಶೀಲತೆಯ ಆಸಕ್ತಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವ ತಂತ್ರಜ್ಞಾನ ಆಧಾರಿತ ಉದ್ಯಮ ವ್ಯವಸ್ಥೆಯನ್ನು ರಾಜ್ಯದ ಇತರ ನಗರಗಳಿಗೂ ವಿಸ್ತರಿಸುವ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ತಮ್ಮದೇ ಜಿಲ್ಲೆಗಳಲ್ಲಿ ಉದ್ಯಮಗಳನ್ನು ಆರಂಭಿಸಲು ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಸ್ಥಳೀಯ ಯುವಜನರ ಆಲೋಚನೆಗಳಿಗೆ ತಾಂತ್ರಿಕ ವೇದಿಕೆ :
ಲೀಪ್ ಗ್ರೋತ್ ಲ್ಯಾಬ್ ಕೇವಲ ಕಚೇರಿ ಅಥವಾ ಮೂಲಸೌಕರ್ಯ ಕೇಂದ್ರವಾಗಿರದೆ, ಯುವ ಉದ್ಯಮಿಗಳು, ನವೋದ್ಯಮಿಗಳು, ಸಂಶೋಧಕರು ಹಾಗೂ ನವೀನ ಆಲೋಚನೆಗಳನ್ನು ಹೊಂದಿರುವವರಿಗೆ ಅಗತ್ಯವಿರುವ ಎಲ್ಲ ರೀತಿಯ ನೆರವು ಒದಗಿಸುವ ಸಮಗ್ರ ನಾವೀನ್ಯತಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
ಹೊಸ ಉದ್ಯಮಗಳನ್ನು ಆರಂಭಿಸಲು ಆಸಕ್ತಿ ಹೊಂದಿರುವವರಿಗೆ ಮಾರ್ಗದರ್ಶನ, ತಾಂತ್ರಿಕ ನೆರವು, ಅತ್ಯಾಧುನಿಕ ಮೂಲಸೌಕರ್ಯ, ಬಂಡವಾಳ ಹೂಡಿಕೆದಾರರ ಸಂಪರ್ಕ ಹಾಗೂ ಉದ್ಯಮ ಅಭಿವೃದ್ಧಿಗೆ ಅಗತ್ಯವಾದ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವುದು ಇದರ ಆಶಯವಾಗಿದೆ. ಆರಂಭಿಕ ಹಂತದಲ್ಲಿರುವ ನವೋದ್ಯಮಗಳು ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತಂದು, ಉತ್ಪನ್ನ ಹಾಗೂ ಸೇವೆಗಳಾಗಿ ಅಭಿವೃದ್ಧಿಪಡಿಸಲು ಈ ಕೇಂದ್ರ ನೆರವಾಗಲಿದೆ.
ಕೃಷಿಯಿಂದ ಕೃತಕ ಬುದ್ಧಿಮತ್ತೆಯವರೆಗೆ ಸಂಶೋಧನೆಗೆ ಆದ್ಯತೆ :
ಲೀಪ್ ಯೋಜನೆಯಡಿ ಕೃಷಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಅರೆವಾಹಕ ತಂತ್ರಜ್ಞಾನ ಸೇರಿದಂತೆ ಭವಿಷ್ಯದ ಬೆಳವಣಿಗೆಗೆ ಪೂರಕವಾಗಿರುವ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗೆ ಪ್ರೋತ್ಸಾಹ ನೀಡಲಾಗುವುದು.
ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ನವೋದ್ಯಮಗಳ ನಡುವೆ ಸಹಭಾಗಿತ್ವ ಬೆಳೆಸುವ ಮೂಲಕ ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಅವುಗಳ ಪ್ರಾಯೋಗಿಕ ಬಳಕೆಗೆ ಅವಕಾಶ ಕಲ್ಪಿಸಲಾಗುವುದು. ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿಯೂ ನವೋದ್ಯಮ ಸಂಸ್ಕೃತಿಯನ್ನು ಬೆಳೆಸುವುದು ಯೋಜನೆಯ ಮತ್ತೊಂದು ಪ್ರಮುಖ ಉದ್ದೇಶವಾಗಿದೆ.
ಬೆಂಗಳೂರು ಹೊರಗೂ ತಂತ್ರಜ್ಞಾನ ಉದ್ಯಮಗಳ ಬೆಳವಣಿಗೆ :
ರಾಜ್ಯದ ವಿವಿಧ ಭಾಗಗಳಲ್ಲಿ ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳು ಮತ್ತು ಉದ್ಯಮಗಳನ್ನು ಸ್ಥಾಪಿಸಲು ಉತ್ತೇಜನ ನೀಡುವ ಮೂಲಕ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ವೇಗ ನೀಡುವುದು ಲೀಪ್ ಯೋಜನೆಯ ಉದ್ದೇಶವಾಗಿದೆ. ಸ್ಥಳೀಯ ಯುವಜನರು ಉದ್ಯೋಗಕ್ಕಾಗಿ ಬೆಂಗಳೂರು ಅಥವಾ ಇತರ ಮಹಾನಗರಗಳಿಗೆ ವಲಸೆ ಹೋಗುವ ಅನಿವಾರ್ಯತೆಯನ್ನು ಕಡಿಮೆ ಮಾಡಿ, ತಮ್ಮ ಜಿಲ್ಲೆಗಳಲ್ಲಿಯೇ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಿ ಬೆಳೆಯಲು ಅಗತ್ಯವಾದ ವಾತಾವರಣ ನಿರ್ಮಿಸಲು ಈ ಯೋಜನೆ ಸಹಕಾರಿಯಾಗಲಿದೆ.
ಕಲಬುರಗಿಯಲ್ಲಿ ಲೀಪ್ ಗ್ರೋತ್ ಲ್ಯಾಬ್ ಸ್ಥಾಪನೆಯಾಗುವುದರಿಂದ ಕಲ್ಯಾಣ ಕರ್ನಾಟಕದ ಯುವಜನರು ತಮ್ಮ ನವೀನ ಆಲೋಚನೆಗಳಿಗೆ ಸೂಕ್ತ ತಾಂತ್ರಿಕ ಬೆಂಬಲ ಮತ್ತು ಮಾರ್ಗದರ್ಶನ ಪಡೆಯಲು ಅವಕಾಶ ದೊರೆಯಲಿದೆ. ಈ ಭಾಗದ ಶೈಕ್ಷಣಿಕ ಸಂಸ್ಥೆಗಳು, ಸಂಶೋಧಕರು, ನವೋದ್ಯಮಿಗಳು ಹಾಗೂ ಉದ್ಯಮ ವಲಯದ ನಡುವೆ ಹೊಸ ಸಂಪರ್ಕ ಮತ್ತು ಸಹಭಾಗಿತ್ವಕ್ಕೂ ವೇದಿಕೆ ನಿರ್ಮಾಣವಾಗಲಿದೆ.
ಅಕ್ಕಮಹಾದೇವಿ ಬಡಾವಣೆಯಲ್ಲಿ ಕೇಂದ್ರ ಸ್ಥಾಪನೆಗೆ ಅಗತ್ಯವಾದ ಭೂಮಿ ಉಚಿತವಾಗಿ ಮಂಜೂರಾಗಿರುವುದರಿಂದ ಮುಂದಿನ ಹಂತದ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ. ಲೀಪ್ ಯೋಜನೆಯ ಮೂಲಕ ಕಲಬುರಗಿಯನ್ನು ತಂತ್ರಜ್ಞಾನ, ಸಂಶೋಧನೆ ಮತ್ತು ನವೋದ್ಯಮ ಚಟುವಟಿಕೆಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಆಶಯ ಹೊಂದಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.