ಸಾಂದರ್ಭಿಕ ಚಿತ್ರ | Photo Credit : PTI

ಕಲಬುರಗಿ: 2026-27ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಬೆಳೆಯುವ ಕಡಲೆ, ಜೋಳ, ಗೋಧಿ, ಕುಸುಬೆ, ಭತ್ತ ಹಾಗೂ ನೆಲಗಡಲೆ (ಶೇಂಗಾ) ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಲು ರೈತರು ತಮ್ಮ ಹತ್ತಿರದ ಬ್ಯಾಂಕ್‌ಗಳು, ಗ್ರಾಮ್ ಒನ್ ಅಥವಾ ಸಿಎಸ್‌ಸಿ ಕೇಂದ್ರಗಳಿಗೆ ತೆರಳಿ ನೋಂದಣಿ ಮಾಡಿಕೊಳ್ಳಬೇಕು ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಕಾರ್ಯ ಭರದಿಂದ ಸಾಗಿದ್ದು, ಬಿತ್ತನೆ ಪೂರ್ವದಿಂದ ಕೊಯ್ಲಿನ ನಂತರದವರೆಗೆ ಸಂಭವಿಸಬಹುದಾದ ಅನಿರೀಕ್ಷಿತ ನೈಸರ್ಗಿಕ ವಿಕೋಪಗಳಿಂದ ಬೆಳೆ ನಷ್ಟವಾಗುವ ಸಾಧ್ಯತೆಯಿದೆ. ಅತಿವೃಷ್ಟಿ, ಅನಾವೃಷ್ಟಿ ಹಾಗೂ ಅಕಾಲಿಕ ಮಳೆಯಂತಹ ಪ್ರಕೃತಿ ವಿಕೋಪಗಳಿಂದ ಯಾವುದೇ ಹಂತದಲ್ಲೂ ಬೆಳೆ ನಾಶವಾಗಬಹುದು. ಇಂತಹ ಸಂದರ್ಭದಲ್ಲಿ ರೈತರನ್ನು ಬೆಳೆ ನಷ್ಟದಿಂದ ರಕ್ಷಿಸುವ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ. ಆದ್ದರಿಂದ ರೈತರು ಬಿತ್ತನೆ ಕಾರ್ಯ ಕೈಗೊಳ್ಳುವುದರ ಜೊತೆಗೆ ಬಿತ್ತನೆ ಮಾಡಿದ ಬೆಳೆಯ ಕ್ಷೇತ್ರವನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ನೋಂದಾಯಿಸುವುದು ಕೂಡ ಮುಖ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆ ವಿಮೆಗಾಗಿ ರೈತರು ಪಾವತಿಸಬೇಕಾದ ವಂತಿಕೆ ಮತ್ತು ನೋಂದಣಿಗೆ ನಿಗದಿಪಡಿಸಿರುವ ಕೊನೆಯ ದಿನಾಂಕದ ವಿವರ ಹೀಗಿದೆ:

ಕಡಲೆ (ಮಳೆಯಾಶ್ರಿತ) ಹಿಂಗಾರು ಬೆಳೆಗೆ ಪ್ರತಿ ಹೆಕ್ಟೇರ್‌ಗೆ 693 ರೂ. ವಂತಿಕೆ ಪಾವತಿಸಬೇಕು. ನೋಂದಣಿಗೆ ಡಿಸೆಂಬರ್ 15 ಕೊನೆಯ ದಿನವಾಗಿದೆ. ಕಡಲೆ (ನೀರಾವರಿ) ಹಿಂಗಾರು ಬೆಳೆಗೆ ಪ್ರತಿ ಹೆಕ್ಟೇರ್‌ಗೆ 625.50 ರೂ. ವಂತಿಕೆ ಪಾವತಿಸಬೇಕು.

ಜೋಳ (ಮಳೆಯಾಶ್ರಿತ) ಹಿಂಗಾರು ಬೆಳೆಗೆ ಪ್ರತಿ ಹೆಕ್ಟೇರ್‌ಗೆ 789 ರೂ. ಹಾಗೂ ಜೋಳ (ನೀರಾವರಿ) ಹಿಂಗಾರು ಬೆಳೆಗೆ ಪ್ರತಿ ಹೆಕ್ಟೇರ್‌ಗೆ 666 ರೂ. ವಂತಿಕೆ ಪಾವತಿಸಬೇಕು. ಈ ಎರಡೂ ಬೆಳೆಗಳ ವಿಮೆ ನೋಂದಣಿಗೆ ನವೆಂಬರ್ 30 ಕೊನೆಯ ದಿನವಾಗಿದೆ.

ಭತ್ತ (ನೀರಾವರಿ) ಹಿಂಗಾರು ಬೆಳೆಗೆ ಪ್ರತಿ ಹೆಕ್ಟೇರ್‌ಗೆ 1,629 ರೂ. ವಂತಿಕೆ ಪಾವತಿಸಬೇಕು. ನೋಂದಣಿಗೆ ನವೆಂಬರ್ 16 ಕೊನೆಯ ದಿನವಾಗಿದೆ.

ಗೋಧಿ (ಮಳೆಯಾಶ್ರಿತ) ಹಿಂಗಾರು ಬೆಳೆಗೆ ಪ್ರತಿ ಹೆಕ್ಟೇರ್‌ಗೆ 829.50 ರೂ. ಹಾಗೂ ಗೋಧಿ (ನೀರಾವರಿ) ಹಿಂಗಾರು ಬೆಳೆಗೆ ಪ್ರತಿ ಹೆಕ್ಟೇರ್‌ಗೆ 550.50 ರೂ. ವಂತಿಕೆ ಪಾವತಿಸಬೇಕು. ಈ ಬೆಳೆಗಳ ವಿಮೆ ನೋಂದಣಿಗೆ ಡಿಸೆಂಬರ್ 31 ಕೊನೆಯ ದಿನವಾಗಿದೆ.

ಕುಸುಬೆ (ಮಳೆಯಾಶ್ರಿತ) ಹಿಂಗಾರು ಬೆಳೆಗೆ ಪ್ರತಿ ಹೆಕ್ಟೇರ್‌ಗೆ 513 ರೂ. ವಂತಿಕೆ ಪಾವತಿಸಬೇಕು. ನೋಂದಣಿಗೆ ನವೆಂಬರ್ 30 ಕೊನೆಯ ದಿನವಾಗಿದೆ.

ಭತ್ತ (ನೀರಾವರಿ) ಬೇಸಿಗೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 1,629 ರೂ. ಹಾಗೂ ನೆಲಗಡಲೆ (ನೀರಾವರಿ) ಬೇಸಿಗೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 1,629 ರೂ. ವಂತಿಕೆ ಪಾವತಿಸಬೇಕು. ಈ ಎರಡೂ ಬೆಳೆಗಳ ವಿಮೆ ನೋಂದಣಿಗೆ 2027ರ ಫೆಬ್ರವರಿ 26 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor