Kalaburagi | ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳೂ ಮುಖ್ಯ: ರಾಜಕುಮಾರ ರಾಠೋಡ
ಕಲಬುರಗಿ: ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ದೈಹಿಕ ಹಾಗೂ ಬೌದ್ಧಿಕ ಚಟುವಟಿಕೆಗಳಲ್ಲಿಯೂ ಭಾಗವಹಿಸುವಂತೆ ಶಿಕ್ಷಕರು ಮತ್ತು ಪಾಲಕರು ಪ್ರೋತ್ಸಾಹಿಸಬೇಕು ಎಂದು ಕಲಬುರಗಿ ಜಿಲ್ಲಾ ಬಾಲಭವನ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ ಹೇಳಿದರು.
ನಗರದ ಆಳಂದ ಕಾಲೋನಿಯ ಬಾಲಕಿಯರ ಬಾಲಮಂದಿರದಲ್ಲಿ ಗುರುವಾರ ರಾಜ್ಯ ಬಾಲಭವನ ಸೊಸೈಟಿ, ಬೆಂಗಳೂರು, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸಮಿತಿ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ‘ಕಲಾಶ್ರೀ’ ಪ್ರಶಸ್ತಿಗಾಗಿ, ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳು ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದು, ರಾಜ್ಯ ಮಟ್ಟದಲ್ಲಿಯೂ ಪ್ರಶಸ್ತಿ ಗಳಿಸುವಂತಾಗಬೇಕು ಎಂದು ಮಕ್ಕಳಲ್ಲಿ ಉತ್ಸಾಹ ತುಂಬಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವಿಶ್ವರಾಧ್ಯ ಇಜೇರಿ ಮಾತನಾಡಿ, ಮಕ್ಕಳಲ್ಲಿನ ಕಲಾ ಪ್ರತಿಭೆಯನ್ನು ಗುರುತಿಸಲು ಇಂತಹ ವೇದಿಕೆಗಳು ತುಂಬಾ ಉಪಯುಕ್ತವಾಗಿವೆ. ಪಾಲಕರು ಮಕ್ಕಳ ಆಸಕ್ತಿಯನ್ನು ಅರಿತು ಅವರನ್ನು ಹುರಿದುಂಬಿಸಬೇಕೇ ಹೊರತು, ಅವರ ಉತ್ಸಾಹ ಕುಗ್ಗಿಸುವ ಕೆಲಸ ಮಾಡಬಾರದು. ಜಿಲ್ಲಾ ಬಾಲಭವನವು ಉತ್ತಮ ಕಾರ್ಯ ಮಾಡುತ್ತಿದ್ದು, ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 9ರಿಂದ 16 ವರ್ಷ ವಯಸ್ಸಿನ ಮಕ್ಕಳಿಗಾಗಿ ಸೃಜನಾತ್ಮಕ ಕಲೆ, ಸೃಜನಾತ್ಮಕ ಬರವಣಿಗೆ, ಸೃಜನಾತ್ಮಕ ಪ್ರದರ್ಶನ ಕಲೆ ಹಾಗೂ ವಿಜ್ಞಾನದಲ್ಲಿ ನೂತನ ಆವಿಷ್ಕಾರ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಥಳೀಯ, ತಾಲ್ಲೂಕು ಮಟ್ಟದ ಮಕ್ಕಳು ಹಾಗೂ ಅಂಧ ಮಕ್ಕಳು ಸೇರಿದಂತೆ ಒಟ್ಟು 260 ಮಕ್ಕಳು ಭಾಗವಹಿಸಿದ್ದರು. ಎಂಟು ಮಂದಿ ತೀರ್ಪುಗಾರರು ಸ್ಪರ್ಧೆಗಳನ್ನು ಮೌಲ್ಯಮಾಪನ ಮಾಡಿ, ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳಿಗೆ ವಿಜೇತರನ್ನು ಆಯ್ಕೆ ಮಾಡಿದರು. ಬೆಂಗಳೂರಿನ ಕರ್ನಾಟಕ ರಾಜ್ಯ ಬಾಲಭವನ ಸೊಸೈಟಿಯ ಉಪಾಧ್ಯಕ್ಷ ಅನಿಲ ಜಮಾದಾರ ಅವರು ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಿವಶರಣಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಪ್ರಭಾರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಣ್ಣ ದೇಸಾಯಿ, ಅಧೀಕ್ಷಕಿ ಶಿಲ್ಪಾ ಹಿರೇಮಠ, ಪ್ರಥಮ ದರ್ಜೆ ಸಹಾಯಕ ಏಜಾಜ್ ಅಹ್ಮದ್, ಇಲಾಖೆಯ ಸಿಬ್ಬಂದಿ ಪ್ರೇಮಾ ಸುತಾರ್, ಸಂಪನ್ಮೂಲ ವ್ಯಕ್ತಿಗಳು, ಬಾಲಕಿಯರ ಬಾಲಮಂದಿರದ ಸಿಬ್ಬಂದಿ, ಮಕ್ಕಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಜಿಲ್ಲಾ ಮಿಷನ್ ಸಂಯೋಜಕಿ ವಿಜಯಲಕ್ಷ್ಮಿ ಜಾಧವ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಬಾಲಭವನ ಸಂಯೋಜಕಿ ಮಾನು ಹುಗಾರ್ ವಂದಿಸಿದರು.