ಕಲಬುರಗಿ: ರಾಜ್ಯ ಕಾಂಗ್ರೆಸ್ ಸರ್ಕಾರ ಬಸ್ ಟಿಕೆಟ್ ಹಾಗೂ ಹಾಲು, ಮೊಸರಿನ ದರ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಬಿಜೆಪಿ ವತಿಯಿಂದ ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಯಿತು.

ಕಾಂಗ್ರೆಸ್ ಸರ್ಕಾರದ ಜನವಿರೋಧಿ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಂಸದ ಡಾ. ಉಮೇಶ್ ಜಾಧವ್, ಸ್ವಾತಂತ್ರ್ಯಾನಂತರ ದೇಶದಲ್ಲಿ ಈ ಪ್ರಮಾಣದಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಿರುವುದು ಇದೇ ಮೊದಲು. ಶೇ.20ರಿಂದ 45ರಷ್ಟು ಟಿಕೆಟ್ ದರ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದರು. ಗ್ರಾಮೀಣ ಭಾಗದಲ್ಲಿ ಜನರಿಗೆ ಉದ್ಯೋಗವಿಲ್ಲದೆ ಸಂಕಷ್ಟ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರು ಹೆಚ್ಚುವರಿ ಹಣವನ್ನು ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದ ಅವರು, ಕೂಡಲೇ ಹೆಚ್ಚಿಸಿರುವ ದರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಬರಗಾಲ ಘೋಷಣೆಯಾಗಿದ್ದು, ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆ ಬಸ್‌ಗಳ ಟಿಕೆಟ್ ದರ ಹೆಚ್ಚಿಸಿರುವುದು ಖಂಡನೀಯ ಎಂದು ಹೇಳಿದರು.

ಹಾಲು, ಮೊಸರು, ತುಪ್ಪ ಹಾಗೂ ಎಣ್ಣೆ ಪದಾರ್ಥಗಳ ಬೆಲೆ ದುಪ್ಪಟ್ಟಾಗಿದೆ. ಹಬ್ಬದ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡುವ ಮೂಲಕ ಜನರಿಗೆ ಮತ್ತಷ್ಟು ಸಂಕಷ್ಟ ಉಂಟುಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿ ಹಾಗೂ ಬಡವರು, ರೈತರು ಮತ್ತು ಕೃಷಿ ಕಾರ್ಮಿಕರ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಚಂದು ಪಾಟೀಲ್, ವಿಶಾಲ ದರ್ಗಿ, ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ, ಲಿಂಗರಾಜ ಬಿರಾದಾರ, ಸಂತೋಷ್ ಹಾದಿಮನಿ, ಶೋಭಾ ಬಾಣಿ, ರಾಜು ವಾಡೇಕರ್, ಆನಂದ ಪಾಟೀಲ್, ಬಾಬುರಾವ್ ಹಾಗರಗುಂಡಗಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor