Kalaburagi | ಪಟಾಕಿ ಮಳಿಗೆಗಳಲ್ಲಿ ಅಪ್ರಾಪ್ತ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡರೆ ಕ್ರಮ: ಮುಹಮ್ಮದ್ ಬಷೀರ್ ಅನ್ಸಾರಿ
ಸಾಂದರ್ಭಿಕ ಚಿತ್ರ | Photo credit : AI
ಕಲಬುರಗಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವ ಪಟಾಕಿ ಮಾರಾಟ ಮಳಿಗೆಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳದಂತೆ ಸೂಚನೆ ನೀಡಲಾಗಿದೆ ಎಂದು ಕಲಬುರಗಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಹಾಗೂ ಸಹಾಯಕ ಕಾರ್ಮಿಕ ಆಯುಕ್ತ ಮುಹಮ್ಮದ್ ಬಷೀರ್ ಅನ್ಸಾರಿ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಪಟಾಕಿ ತಯಾರಿಕೆ, ಮಾರಾಟ ಹಾಗೂ ಇತರ ಪ್ರಕ್ರಿಯೆಗಳು ಅಪಾಯಕಾರಿ ಉದ್ದಿಮೆಗಳ ವ್ಯಾಪ್ತಿಗೆ ಬರುವುದರಿಂದ ಈ ಮಳಿಗೆಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಪಟಾಕಿ ಮಾರಾಟ ಮಳಿಗೆಗಳು ಅಥವಾ ತಯಾರಿಕಾ ಘಟಕಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡಿರುವುದು ಕಂಡುಬಂದರೆ, ಸಂಬಂಧಪಟ್ಟ ಮಾಲೀಕರ ವಿರುದ್ಧ ಬಾಲಕಾರ್ಮಿಕ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಬಾಲ ಹಾಗೂ ಕಿಶೋರ ಕಾರ್ಮಿಕರ ದುಡಿಮೆಯನ್ನು ನಿಯಂತ್ರಿಸಲು ಮತ್ತು ನಿಷೇಧಿಸಲು ಬಾಲ್ಯಾವಸ್ಥೆ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ಕ್ಕೆ 2016ರಲ್ಲಿ ತಿದ್ದುಪಡಿ ತಂದು ಜಾರಿಗೆ ತರಲಾಗಿದೆ. ಈ ಕಾಯ್ದೆಯನ್ವಯ ಎಲ್ಲ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 14ರಿಂದ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.