ಸಿದ್ರಾಮ, ಮಾರುತಿ ಭೋವಿ, ಅಂಬಿಕಾ 

ಕಲಬುರಗಿ: ಮಳಖೇಡ ಬಸ್ ನಿಲ್ದಾಣದ ಸಮೀಪ ನಿವಾಸಿಯಾಗಿದ್ದ ಕಂಪ್ಯೂಟರ್ ಸೆಂಟರ್ ಮಾಲಕ ಸಿದ್ರಾಮ ಬಸಲಿಂಗಪ್ಪ ಮಾಡಗಿ ಪಾಟೀಲ (40) ಅವರ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪತ್ನಿ ಅಂಬಿಕಾ ಹಾಗೂ ಆಕೆಯ ಪ್ರಿಯಕರ ಎನ್ನಲಾದ ಮಾರುತಿ ಭೋವಿ ಯನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರ ವಿರುದ್ಧ ಕೊಲೆ ಪ್ರಕರಣವಾಗಿ ದಾಖಲಾಗಿದೆ.

ಮೃತರ ತಾಯಿ ಬಸಮ್ಮ ಅವರು ನ.5ರಂದು ಮಳಖೇಡ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಲಂ 103ರ ನಂತೆ ಪ್ರಕರಣ ದಾಖಲಿಸಲಾಗಿದೆ.

ದೂರಿನಲ್ಲಿ ಏನಿದೆ? :

ಬೆಂಗಳೂರಿನಲ್ಲಿರುವ ಮಗಳ ಮನೆಗೆ ತೆರಳಲು ಬಸಮ್ಮ ಅವರು ನ.2ರಂದು ರಾತ್ರಿ ಸೇಡಂ ರೈಲು ನಿಲ್ದಾಣದಿಂದ ಪ್ರಯಾಣ ಬೆಳೆಸಿದ್ದರು. ಈ ವೇಳೆ ಸಿದ್ರಾಮ ಅವರೇ ತಾಯಿಯನ್ನು ರೈಲು ನಿಲ್ದಾಣಕ್ಕೆ ಬಿಟ್ಟು ಬಂದಿದ್ದರು. ನ.3ರಂದು ಬೆಳಿಗ್ಗೆ ಸುಮಾರು 9.30ಕ್ಕೆ ಸೊಸೆ ಅಂಬಿಕಾ ದೂರವಾಣಿ ಕರೆ ಮಾಡಿ, ಸಿದ್ರಾಮ ಅವರು ರಾತ್ರಿ ಊಟಕ್ಕೆಂದು ಹೊರಗೆ ಹೋಗಿ ಬೆಳಿಗ್ಗೆ 7.20ಕ್ಕೆ ಮನೆಗೆ ಬಂದು ಮಲಗಿದ್ದರು. ಅವರನ್ನು ಎಬ್ಬಿಸಲು ಹೋದಾಗ ದೇಹ ತಣ್ಣಗಾಗಿತ್ತು ಹಾಗೂ ಮೈಮೇಲೆ ತರಚಿದ ಗಾಯಗಳಿದ್ದವು ಎಂದು ತಿಳಿಸಿದ್ದರು ಎನ್ನಲಾಗಿದೆ.

ಕೂಡಲೇ ಸಂಬಂಧಿಕರು ಸಿದ್ರಾಮ ಅವರನ್ನು ಮಳಖೇಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದರು. ಬಳಿಕ ಮೃತದೇಹವನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿತ್ತು ಎಂದು ತಿಳಿದು ಬಂದಿದೆ.

ನ.4ರಂದು ಶವಾಗಾರದಲ್ಲಿ ಮಗನ ಮೃತದೇಹವನ್ನು ಪರಿಶೀಲಿಸಿದಾಗ ಮುಖದ ಎಡಭಾಗ ಮತ್ತು ಎದೆಯ ಎಡಭಾಗದಲ್ಲಿ ರಕ್ತ ಹೆಪ್ಪುಗಟ್ಟಿದ ಗಾಯಗಳು, ಕುತ್ತಿಗೆಯ ಸುತ್ತ ತರಚಿದ ಗಾಯಗಳು ಹಾಗೂ ಮೂಗು, ಬಾಯಿ ಮತ್ತು ಕಿವಿಯಿಂದ ರಕ್ತ ಸೋರಿದ ಕುರುಹುಗಳು ಕಂಡುಬಂದಿದ್ದವು ಎಂದು ಬಸಮ್ಮ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮೃತರ ಪತ್ನಿ ಅಂಬಿಕಾ ಅವರು ಈ ಹಿಂದೆ ಮಳಖೇಡ ಪೊಲೀಸ್ ಠಾಣೆಯಲ್ಲಿ ಪತಿಯ ಅನುಮಾನಾಸ್ಪದ ಸಾವಿನ ಕುರಿತು ದೂರು ದಾಖಲಿಸಿದ್ದರು. ಇದೀಗ ತಾಯಿಯ ದೂರಿನ ಆಧಾರದ ಮೇಲೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ಪತ್ನಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor