×
Ad

ಸರಕಾರಕ್ಕೆ ಮಹಿಳೆಯರ ಮೇಲೆ ಹೆಚ್ಚು ಭರವಸೆ ಇದೆ : ಸಚಿವ ಶರಣಪ್ರಕಾಶ್ ಪಾಟೀಲ್

Update: 2025-02-24 17:55 IST

ಕಲಬುರಗಿ : ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಮಹಿಳಾ ಕೇಂದ್ರಿತ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳೆಗೆ ಹಣ ನೀಡಿದರೆ ಅದನ್ನು ಕುಟುಂಬಕ್ಕೆ ಸರಿಯಾದ ರೀತಿಯಲ್ಲಿ ವಿನಿಯೋಗಿಸುತ್ತಾಳೆ ಎಂಬುವ ನಂಬಿಕೆ ನಮ್ಮದು. ಹೀಗಾಗಿ ಮಹಿಳೆಯರ ಮೇಲೆ ಸರಕಾರಕ್ಕೆ ಹೆಚ್ಚಿನ ಭರವಸೆ ಇದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್ ಹೇಳಿದರು.

ಮಂಗಳವಾರ ಇಲ್ಲಿನ ಶ್ರೀ ಶರಣಬಸವೇಶ್ವರ ಜಾತ್ರೆ ಮೈದಾನದಲ್ಲಿ ಕರ್ನಟಕ ರಾಜ್ಯ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ನಮ್ಮ ಸರಸ್ ಮೇಳ (ರಾಷ್ಟ್ರ ಮಟ್ಟದ ಮಹಿಳಾ ಸ್ವ-ಸಹಾಯ ಗುಂಪುಗಳು ತಯ್ಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ) ವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದರು.

ಹಿಂದೆ ಎಸ್.ಎಂ.ಕೃಷ್ಣ ಸರಕಾರದ ಅವಧಿಯಲ್ಲಿ ಮಹಿಳಾ ಸ್ವ-ಸಹಾಯ ಗುಂಪು ರಚಿಸುವ ಮಹತ್ವದ ನಿಧಾರ ಕೈಗೊಂಡಿದ್ದ ಪರಿಣಾಮ ಇಂದು ರಾಜ್ಯದಾದ್ಯಂತ 2.80 ಲಕ್ಷ ಮಹಿಳಾ ಸ್ವ-ಸಹಾಯ ಗುಂಪುಗಳಿವೆ. ಈ ಮಹಿಳಾ ಗುಂಪುಗಳು ಇಂದು ಎಲ್ಲೆಡೆ ಸ್ವಯಂ ಉದ್ಯೋಗದ ಮೂಲಕ ಮಾದರಿಯಾಗಿದ್ದಾರೆ. ಇಂತಹ ಸ್ವ-ಸಹಾಯ ಸಂಘಗಳಿಗೆ ಇನ್ನಷ್ಟು ಬೂಸ್ಟ್ ನೀಡಲು ರಾಜ್ಯದಾದ್ಯಂತ ತಲಾ 15 ಲಕ್ಷ ರೂ. ವೆಚ್ಚದಲ್ಲಿ 50 ಕಡೆ “ಅಕ್ಕ ಕೆಫೆ” ಮತ್ತು ತಲಾ 1 ಲಕ್ಷ ರೂ. ವೆಚ್ಚದಲ್ಲಿ 2,500 ಕಡೆ “ಕಾಫಿ ಕಿಯೋಸ್” ಸ್ಥಾಪಿಸಲು ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ ಎಂದರು.

ಇತ್ತೀಚೆಗೆ ಮೈಕ್ರೋ ಪೈನಾನ್ಸ್ ಗಳು ಈ ಮಹಿಳಾ ಸ್ವ-ಸಹಾಯ ಗುಂಪಗಳಿಗೆ ಸಾಲ ನೀಡಿ ವಸೂಲಾತಿಗೆ ಕೊಡಬಾರದ ಕಿರುಕುಳ ನೀಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸರಕಾರದಿಂದಲೆ ಸಾಲ ಸಹಕಾರ ಸಂಘ ಸ್ಥಾಪಿಸಿ ಅದರ ಮುಖೇನ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಾಲ ನೀಡಲು ಯೋಚನೆ ನಡೆದಿದೆ ಎಂದ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ ಅವರು, ಮಹಿಳೆಯಿಂದಲೆ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂದರು.

ಕಲಬುರಗಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಸ್ವ-ಸಹಾಯ ಗುಂಪುಗಳು ತಯ್ಯಾರಿಸಿರುವ ಉತ್ಪನ್ನಗಳಿಗೆ ಪ್ರಚಾರದ ಜೊತೆ ಮಾರುಕಟ್ಟೆ ಕಲ್ಪಿಸಲು ಇಂದಿಲ್ಲಿ 10 ದಿನಗಳ ಕಾಲ ರಾಷ್ಟ್ರ ಮಟ್ಟದ ವಸ್ತು ಪ್ರದರ್ಶನ ಮೇಳ ಆಯೋಜಿಸಿದ್ದು, 9 ರಾಜ್ಯಗಳ ಮಹಿಳಾ ಸ್ವ-ಸಹಾಯ ಗುಂಪುಗಳು ತಮ್ಮ ಉತ್ಪನ್ನಗಳನ್ನು ಇಲ್ಲಿಗೆ ಮಾರಾಟಕ್ಕೆ ತಂದಿದ್ದಾರೆ. 230 ಸ್ಟಾಲ್ ಹಾಕಲಾಗಿದೆ. 20 ಲೈವ್ ಫುಡ್ ಸ್ಟಾಲ್ ಗಳಿದ್ದು, ವಿವಿಧ ಪ್ರದೇಶದ ಬಗೆ-ಬಗೆಯ ತಿಂಡಿಗಳು ಇಲ್ಲಿ ಲಭ್ಯವಿದೆ. ಜಿಲ್ಲೆಯ ಜನತೆ ಇದರ ಲಾಭ ಪಡೆಯಬೇಕೆಂದು ಅವರು ಕೋರಿದರು.

ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನದ ನಿರ್ದೇಶಕಿ ಪಿ.ಐ.ಶ್ರೀವಿದ್ಯಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಾದ್ಯಂತ 35 ಲಕ್ಷ ಮಹಿಳೆಯರು ಮಹಿಳಾ ಸ್ವ-ಸಹಾಯ ಗುಂಪುಗಳ ಭಾಗವಾಗಿದ್ದು, ಇವರು ಉತ್ಪಾದಿಸುವ ವಸ್ತುಗಳ ಮಾರಾಟಕ್ಕೆ ವೇದಿಕೆ ಕಲ್ಪಿಸಲು ಪ್ರತಿ ವರ್ಷ ರಾಷ್ಟ್ರ ಮಟ್ಟದ ಸರಸ್ ಮೇಳ ಆಯೋಜಿಸುತ್ತಿದ್ದು, ಅದರಂತೆ ಈ ಬಾರಿ ಕಲಬುರಗಿಯಲ್ಲಿ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಪರಿವರ್ತನೆ ಅಭಿಯಾನಕ್ಕೆ ಚಾಲನೆ :

ಮಹಿಳೆಯರಿಗೆ ಋತುಚಕ್ರ, ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಆರೈಕೆ, ಮಹಿಳಾ ಹಕ್ಕುಗಳು, ಮಹಿಳೆಯರ ಮೇಲೆ ಮಾನಸಿಕ ಮತ್ತು ದೈಹಿಕ ಹಲ್ಲೆ ತಡೆಯುವ ನಿಟ್ಟಿನಲ್ಲಿ ಸಮುದಾಯದ ಸಹಕಾರ, ಬಾಲ್ಯ ವಿವಾಹ, ಭ್ರೂಣ ಲಿಂಗ ಪತ್ತೆ ಸೇರಿದಂತೆ ಅನೇಕ ವಿಚಾರಗಳ ಕುರಿತು ಮಹಿಳೆಯರಿಗೆ ಮತ್ತು ಜನಸಮುದಾಯಕ್ಕೆ ಮುಂದಿನ ಮೂರು ತಿಂಗಳ ಕಾಲ ಅಭಿಯಾನದ ಮೂಲಕ ಅರಿವು ಮೂಡಿಸುವ “ಪರಿವರ್ತನೆ” ಅಭಿಯಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಚಾಲನೆ ನೀಡಿದರು.

13 ಸಂಘಗಳಿಗೆ ಚೆಕ್ ವಿತರಣೆ :

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಜಿಲ್ಲೆಯ 13 ಸ್ವ-ಸಹಾಯ ಗುಂಪುಗಳಿಗೆ ಇದೇ ಸಂದರ್ಭದಲ್ಲಿ ಸಮುದಾಯ ಬಂಡವಾಳ ನಿಧಿಯಡಿ 1 ಲಕ್ಷ ರೂ. ಮತು 1.50 ಲಕ್ಷ ರೂ. ಗಳ ಚೆಕ್ ಗಳನ್ನು ಸಚಿವರುಗಳು ಮತ್ತು ಗಣ್ಯರು ವಿತರಣೆ ಮಾಡಿದರು.

ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೆಗೌಡ, ಶಾಸಕರಾದ ಎಂ.ವೈ.ಪಾಟೀಲ್‌, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಯಲ್ಲಪ್ಪ ನಾಯ್ಕೋಡಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಸಜ್ಜನ್ ಸೇರಿದಂತೆ ಇನ್ನಿತರ ಗಣ್ಯರು ಇದ್ದರು.

ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಸ್ವಾಗತಿಸಿದರು. ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನದ ಹೆಚ್ಚುವರಿ ನಿರ್ದೇಶಕ ಅರ್ಜುನ್ ಒಡೆಯರ್ ವಂದಿಸಿದರು. ಪ್ರತಿಭಾ ಗೌಡ ನಿರೂಪಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News