ಬೆಳೆ ವಿಮೆಯಡಿ ಮಧ್ಯಂತರ ಪರಿಹಾರಕ್ಕೆ ಸರ್ಕಾರ ಆದೇಶ | ಶೀಘ್ರದಲ್ಲಿಯೆ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ: ಡಿಸಿ ಬಿ.ಫೌಝಿಯಾ ತರನ್ನುಮ್
ಕಲಬುರಗಿ: ಪ್ರಸಕ್ತ 2025-26ನೇ ಸಾಲಿನಲ್ಲಿ ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಹಾನಿಯಾದ ಪ್ರದೇಶಗಳ ಪೈಕಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಮಧ್ಯಂತರ ಪರಿಹಾರ ಬಿಡುಗಡೆ ಸರ್ಕಾರ ಆದೇಶಿಸಿದ್ದು, ಕೆಲವೆ ದಿನದಲ್ಲಿ ರೈತರ ಬ್ಯಾಂಕ್‍ಖಾತೆಗೆ ಪರಿಹಾರ ಹಣ ಜಮೆಯಾಗಲಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಅತಿವೃಷ್ಠಿಯಿಂದ ಜಿಲ್ಲೆಯಲ್ಲಿ 11,727.5 ಹೆಕ್ಟೇರ್ ಹತ್ತಿ, 822.46 ಹೆಕ್ಟೇರ್ ಉಳ್ಳಾಗಡ್ಡಿ, 3,22,734 ಹೆಕ್ಟೇರ್ ತೊಗರಿ, 392.08 ಸೂರ್ಯಕಾಂತಿ ಹಾಗೂ 192.61 ಆರಿಶಿಣ ಸೇರಿದಂತೆ ಒಟ್ಟಾರೆ 3,35,868.7 ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಯಾಗಿದೆ ಎಂದು 2,68,699 ರೈತರಿಂದ ದೂರು ಸ್ವೀಕೃತವಾದ ಹಿನ್ನೆಲೆಯಲ್ಲಿ ಮಧ್ಯಂತರ ಪರಿಹಾರ ಬಿಡುಗಡೆಗೆ ಸಲ್ಲಿಸಲಾದ ಜಿಲ್ಲಾಡಳಿತ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರದಲ್ಲಿಯೆ ಈ ರೈತರ ಖಾತೆಗೆ ಪರಿಹಾರ ಹಣ ಜಮೆಯಾಗಲಿದೆ.
ಇನ್ನುಳಿದಂತೆ ಉದ್ದು, ಹೆಸರು, ಸೋಯಾಅವರೆ ಹಾಗೂ ಇನ್ನಿತರ ಬೆಳಗಳಿಗೆ ಬೆಳೆ ಹಾನಿ ಕುರಿತು ದೂರು ನೀಡಿದ 22,385 ರೈತರಿಗೆ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪದಡಿ (Localized calamity) ಪರಿಹಾರ ಹಣ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.