×
Ad

ಈ ಬಾರಿ ಸಚಿವ ಸ್ಥಾನ ನನಗೆ ಸಿಗುವ ವಿಶ್ವಾಸವಿದೆ : ಶಾಸಕ ಡಾ.ಅಜಯಸಿಂಗ್‌

Update: 2025-07-12 17:12 IST

ಕಲಬುರಗಿ: ಮುಂಬರುವ ಅಕ್ಟೋಬರ್ ನಲ್ಲಿ ರಾಜ್ಯ ಸಚಿವ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆಯಿದ್ದು, ಆ ವೇಳೆ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರೂ ಆಗಿರುವ ಜೇವರ್ಗಿ ಶಾಸಕ ಡಾ.ಅಜಯಸಿಂಗ್‌ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾವು ಪಕ್ಷದ ಶಿಸ್ತಿನ ಸಿಪಾಯಿ. ಎಂದಿಗೂ ಪಕ್ಷದ ವಿರುದ್ಧ ಹೋದವನಲ್ಲ. ಸಚಿವ ಸ್ಥಾನದ ಕುರಿತಾಗಿ ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದ್ದೇನೆ. ಪಕ್ಷದ ಹಿತಾಸಕ್ತಿಗೆ ಧಕ್ಕೆ ಆಗುವ ನಿಟ್ಟಿನಲ್ಲಿ ಬಹಿರಂಗವಾಗಿ ಹೇಳಲು ಇಚ್ಚಿಸಲ್ಲ. ಒಟ್ಟಾರೆ ಈ ಸಲ ಮಂತ್ರಿ ಭಾಗ್ಯ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಬದಲಾವಣೆ ಕುರಿತಾಗಿ ನಮಗೆ ಯಾವುದೇ ಮಾಹಿತಿ ಇಲ್ಲ. ಪ್ರಮುಖವಾಗಿ ಇಂತಹದ್ದೆಲ್ಲ ಪಕ್ಷದ ಉನ್ನತ ಮಟ್ಟದಲ್ಲಿ ಚರ್ಚೆ ಆಗುತ್ತದೆ. ಯಾವುದೇ ಒಪ್ಪಂದ ಆಗಿಲ್ಲ ಎಂಬುದು ತಮಗೆ ಗೊತ್ತಿರುವ ವಿಷಯ. ನಾನು ಸುರ್ಜೆವಾಲ ಅವರಿಗೆ ಯಾವುದೇ ವಿಷಯ ಸಂಬಂಧವಾಗಿ ದೂರು ನೀಡಿಲ್ಲ. ಕ್ಷೇತ್ರದ ಅಭಿವೃದ್ಧಿ ಹಾಗೂ ಗ್ಯಾರಂಟಿಗಳ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ ಎಂದರು.

ಕಲ್ಯಾಣ ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮ :

ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಸುಧಾರಣೆಗೆ ಹೊಸ ಆಯಾಮ ಕಲ್ಪಿಸಲು ಮಂಡಳಿ ಕಂಕಣಬದ್ಧವಾಗಿದ್ದು, ಅಕ್ಷರ ಆವಿಷ್ಕಾರ ಎಂಬ ಕಾರ್ಯಕ್ರಮ ರೂಪಿಸಿದರೆ ಸಾಲದು, ಶೈಕ್ಷಣಿಕ ಸುಧಾರಣೆಗೆಂದು ಕಲ್ಯಾಣ ಕರ್ನಾಟಕದ ಭಾಗಕ್ಕೆ ಕೆಲವೊಂದು ನಿಯಮಗಳನ್ನು ರೂಪಿಸುವುದು ಅಗತ್ಯವಿದೆ ಎಂದರು.

ಸೆ.17ರ ನಿರ್ಣಯಗಳು ಕ್ರಮೇಣ ಅನುಷ್ಠಾನ:

ಕಳೆದ ವರ್ಷದ ಸೆಪ್ಟೆಂಬ‌ರ್ 17ರಂದು ಕಲಬುರಗಿಯಲ್ಲಿ ನಡೆದ ಕ.ಕ ಭಾಗದ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಕೈಗೊಳ್ಳಲಾದ ನಿರ್ಣಯಗಳನ್ನು ಒಂದೊಂದಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಪ್ರತ್ಯೇಕ ಸಚಿವಾಲಯಕ್ಕೆ ಸೆ.17ರೊಳಗೆ ಒಂದು ಸ್ವರೂಪ ದೊರಕಲಿದೆ. ಕಲ್ಯಾಣ ಪಥ ಹಾಗೂ ಪ್ರಜಾಸೌಧ ನಿರ್ಮಾಣ ಸಂಪುಟ ಸಭೆಯ ಪ್ರಮುಖ ನಿರ್ಣಯಗಳಾಗಿವೆ. ಬರುವ ಆ.4 ರಂದು ಕೊಪ್ಪಳದಲ್ಲಿ ಈ ಭಾಗದಲ್ಲಿನ ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ವಸತಿ ನಿಲಯಗಳ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸುವರು ಎಂದು ಡಾ. ಅಜಯಸಿಂಗ್ ಧರ್ಮಸಿಂಗ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News