2019ರ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನದಿಂದಲೇ ನನಗೆ ಹಿನ್ನಡೆಯಾಯಿತು : ಮಲ್ಲಿಕಾರ್ಜುನ ಖರ್ಗೆ ಆರೋಪ
ʼʼಬ್ಯಾಲೆಟ್ ಪೇಪರ್ ನಿರ್ಧಾರ ಸ್ವಾಗತಾರ್ಹʼʼ
ಕಲಬುರಗಿ : 2019ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಮತಕ್ಷೇತ್ರದ ಐದು ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ಮತಗಳ್ಳತನ ಆಗಿರುವುದರಿಂದಲೇ ನನಗೆ ಹಿನ್ನಡೆಯಾಯಿತು ಎಂದು ಎಐಸಿಸಿ ಅಧ್ಯಕ್ಷರೂ ಆದ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಗ ಚುನಾವಣೆಗಿಂತ ಮುಂಚೆ ಪ್ರಧಾನಿ ನರೇಂದ್ರ ಮೋದಿ ಅವರು, ಖರ್ಗೆ ಅವರು ಬಹಳಷ್ಟು ಬಾರಿ ಗೆಲ್ಲುತ್ತಿದ್ದಾರೆ, ಆದರೆ ಈ ಬಾರಿ ಗೆಲ್ಲುತ್ತಾರೆ, ಏನಾಗುತ್ತೆ ಗೊತ್ತಿಲ್ಲ ಎಂದು ಸಂಸತ್ತಿನಲ್ಲೇ ಹೇಳಿದ್ದಾರೆ. ಒಬ್ಬ ಪ್ರಧಾನಿ ಹೀಗೆ ಹೇಳಿದರೆ ನನಗೆ ಸಂಶಯ ಬರಬೇಕೋ, ಇಲ್ಲವೋ ನೀವೇ ಹೇಳಿ ಎಂದು ಪತ್ರಕರ್ತರನ್ನು ಪ್ರಶ್ನಿಸಿದ್ದಾರೆ.
ಕೆಲ ವಿಧಾನಸಭಾ ಕ್ಷೇತ್ರದಲ್ಲಿ 5 ಸಾವಿರ ಮತಗಳು ನಕಾರಾತ್ಮಕ ಬರುತ್ತಿದ್ದವು. ಆದರೆ 2019ರ ಚುನಾವಣೆಯಲ್ಲಿ ಆಯಾ ಕ್ಷೇತ್ರಗಳಲ್ಲಿ 20ರಿಂದ 25 ಸಾವಿರ ಮತಗಳು ನೆಗೆಟಿವ್ ಆಗಿ ಬಂದಿವೆ. ಹಾಗಾಗಿ ನನಗೆ ಹಿನ್ನಡೆಯಾಗಿದೆ. ಈ ವಿಷಯದ ಬಗ್ಗೆ ನಾನು ಮಾತನಾಡಲಿಲ್ಲ, ಯಾಕೆಂದರೆ ನನ್ನ ಮೇಲೆ ಜನರು ಸಿಟ್ಟಾಗಿರಬಹುದು, ದ್ವೇಷ ಮಾಡಿರಬಹುದು, ಅಥವಾ ಜಾಸ್ತಿ ಬೆಳೆಯುತ್ತಿದ್ದೇನೆ ಎಂದು ನನಗೆ ಕಡಿವಾಣ ಹಾಕಬೇಕು ಎಂದುಕೊಂಡರೋ ಗೊತ್ತಿಲ್ಲ ಎಂದರು.
ಪ್ರಧಾನಿ ಅಹಂ ಬಿಟ್ಟು ದೇಶದ ಒಳಿತಿಗೆ ಕೆಲಸ ಮಾಡಲಿ :
ಬಿಜೆಪಿಯವರು ಪ್ರತಿಯೊಂದಕ್ಕೆ ಎಲ್ಲಿಯವರೆಗೂ ಮೋದಿ ಇರ್ತಾರೆ, ನಾವು ಇದು ಬಿಡಲ್ಲ, ಅದು ಬಿಡಲ್ಲ, ಇದು ಮಾಡುತ್ತೇವೆ ಎಂದೆಲ್ಲ ಹೇಳುತ್ತಾರೆ. ಪ್ರಧಾನಿ ಅವರಿಗೆ ತಾನು ಏನು ಮಾಡಿದರೂ ನಡೆಯುತ್ತದೆ ಎಂಬ ಅಹಂಕಾರವಿದೆ, ಈಗ ಅವರ ಅಹಂಕಾರವೇ ತಿರುಗಿಬಿದ್ದಿದೆ. ಹಲವು ವರ್ಷಗಳಿಂದ ಅನುಸರಿಸುತ್ತಿದ್ದ ಅಲಿಪ್ತ ನೀತಿಯನ್ನೇ ಅವರು ಸರಿಯಾಗಿ ಬಳಕೆಗೆ ತಂದಿಲ್ಲ. ವಿದೇಶಾಂಗ ನೀತಿ ಅನುಸರಿಸುವಲ್ಲಿ ಮೋದಿ ವಿಫಲರಾಗಿದ್ದಾರೆ ಎನ್ನುವುದು ಜಗಜ್ಜಾಹೀರವಾಗಿದೆ ಎಂದ ಅವರು, ಮೋದಿ ತಮ್ಮ ಅಹಂ ಬಿಟ್ಟು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಅಲಿಪ್ತ ನೀತಿ ನಿರ್ಲಕ್ಷಿಸಿ ಟ್ರಂಪ್ ಪರ ಪ್ರಚಾರ ಮಾಡಿದ್ದರು. ತನ್ನ ಆತ್ಮೀಯ ಸ್ನೇಹಿತ ಎಂದೂ ಹೇಳಿಕೊಂಡರು. ಈ ನಡೆ ಭವಿಷ್ಯದಲ್ಲಿ ಬೇರೆ ರಾಷ್ಟ್ರಗಳ ನಾಯಕರು ಭಾರತಕ್ಕೆ ಬಂದು ಪ್ರಚಾರ ಮಾಡಲು ಮೇಲ್ಪಂಕ್ತಿ ಹಾಕಿದಂತಾಗಲ್ಲವೇ'? ಎಂದು ಪ್ರಶ್ನಿಸಿದ ಅವರು, ನಮಗೆ ದೇಶ ಮುಖ್ಯವಾಗಬೇಕೇ ಹೊರತು, ಪಕ್ಷ, ವ್ಯಕ್ತಿ ಮುಖ್ಯವಾಗಬಾರದು ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದಲ್ಲಿ ಜಿಎಸ್‌ಟಿ ಕಡಿಮೆಯಿಂದಾಗಿ ಬಡವರಿಗೆ ಅನುಕೂಲವಾಗಲಿದೆ. ಇದನ್ನು ಟೀಕಿಸಲ್ಲ. ಆದರೆ, ಜಿಎಸ್‌ಟಿ ಕಡಿಮೆ ಮಾಡುವಂತೆ ಕಳೆದ ಎಂಟು ವರ್ಷಗಳ ಹಿಂದೆಯೇ ತಿಳಿಸಿದ್ದೆವು. ಆಗ ಅವರು ಪರಿಷ್ಕರಣೆ ಮಾಡದೆ ಈಗ ಯಾವುದೋ ಚುನಾವಣೆ ಮುಂದಿಟ್ಟುಕೊಂಡು ಪರಿಷ್ಕರಣೆ ಮಾಡುತ್ತಿರುವುದು ಗೊತ್ತಾಗುತ್ತದೆ ಎಂದರು.
ನಾವು ಬಹುಮತ ಇಲ್ಲದಿದ್ದರೂ ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ಕಲಂ ಜಾರಿಗೊಳಿಸಿದೆವು. ಯಾವುದಕ್ಕೂ ಒಂದು ದೂರದೃಷ್ಟಿ ಇರಬೇಕು, ಮೋದಿಗೆ ಈ ದೇಶಕ್ಕಾಗಿ ಏನು ಮಾಡಬೇಕೆನ್ನುವ ದೂರದೃಷ್ಟಿಯೇ ಇಲ್ಲ. ಕಲಬುರಗಿಗೆ ರೈಲ್ವೆ ವಿಭಾಗ, ಟೆಕ್ಸ್ ಟೈಲ್ಸ್ ಪಾರ್ಕ್ ಮತ್ತಿತ್ತರ ಅಭಿವೃದ್ಧಿಗಾಗಿ ಪಣ ತೊಟ್ಟಿದ್ದೆವು. ಆದರೆ ಮೋದಿ ಸರ್ಕಾರ ಇದನ್ನೆಲ್ಲ ಕೈಬಿಟ್ಟು ಯಾವುದೋ ಕಲುಷಿತ ಕಾರ್ಖಾನೆಗೆ ಜಾಗ ಕೊಟ್ಟು ಅಲ್ಲಿಂದ ನಮ್ಮ ನದಿಗಳಿಗೆ ನೀರು ಹರಿಸಿ, ನೀರೆಲ್ಲ ಕಲುಷಿತ ಮಾಡಿಸಲು ಅವಕಾಶ ಕೊಟ್ಟಿದೆ ಎಂದು ಕಿಡಿಕಾರಿದರು.
ಬ್ಯಾಲೆಟ್ ಪೇಪರ್ ನಿರ್ಧಾರ ಸ್ವಾಗತಾರ್ಹ :
ರಾಜ್ಯದಲ್ಲಿ ಸ್ಥಳೀಯ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡುವ ನಿರ್ಧಾರ ಸ್ವಾಗತಾರ್ಹ. 15-16 ವರ್ಷಗಳಿಂದ ಬಳಸುತ್ತಿರುವ ಇವಿಎಂಗಳನ್ನೇ ಬಿಜೆಪಿಗರು ನಂಬುವುದಾದರೆ, 50 ವರ್ಷ ಬಳಸಿದ್ದ ಮತಪತ್ರಗಳನ್ನು ಯಾಕೆ ನಂಬಬಾರದು ಎಂದು ಪ್ರಶ್ನಿಸಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಇದ್ದರು.