×
Ad

ಜನೌಷಧಿ ಕೇಂದ್ರದಿಂದ ಉಚಿತ ಔಷಧ ಕೊಡೋದಾದ್ರೆ ನಾನೇ ಮಳಿಗೆ ಕಟ್ಟಿಸಿಕೊಡುವೆ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್

Update: 2025-05-25 18:11 IST

 ಡಾ.ಶರಣಪ್ರಕಾಶ್‌ ಪಾಟೀಲ್‌

ಕಲಬುರಗಿ : ಕೇಂದ್ರ ಸರಕಾರದ ಮೂಲದಿಂದ ಸ್ಥಾಪಿಸಲ್ಪಡುತ್ತಿರುವ ಜನೌಷಧಿ ಕೇಂದ್ರಗಳಿಂದ ರೋಗಿಗಳಿಗೆ ಉಚಿತ ಔಷಧ ಕೊಡೋದಾದ್ರೆ ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ ನಾನೇ ಮಳಿಗೆಗಳನ್ನು ಕಟ್ಟಿಸಿಕೊಡುವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು 2013ರಿಂದ ವೈದ್ಯಕೀಯ ಸಚಿವನಾಗಿದ್ದಾಗಿನಿಂದಲೂ ಜಿಲ್ಲಾಸ್ಪತ್ರೆಗಳಲ್ಲಿ ಜನೌಷಧಿ ಮೆಡಿಕಲ್ ಸ್ಟೋರ್ ಗಳನ್ನು ಹಾಕಲು ಬಿಟ್ಟಿಲ್ಲ, ಈಗ ದುಡ್ಡು ತೆಗೆದುಕೊಂಡು ಔಷಧಿ ಕೊಡುತ್ತಿರುವ ವಿವಿಧ ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ತಲೆ ಎತ್ತಿರುವ ಜನೌಷಧಿ ಕೇಂದ್ರಗಳನ್ನು ತೆಗೆಸಲಾಗುತ್ತಿದೆ ಎಂದರು.

ಸರಕಾರದಿಂದಲೇ ಈಗಾಗಲೇ ರೋಗಿಗಳಿಗೆ ಉಚಿತ ಔಷಧಿಗಳನ್ನು ಕೊಡಲಾಗುತ್ತಿದೆ, ಒಂದು ವೇಳೆ ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳು ಲಭ್ಯ ಇಲ್ಲದಿದ್ದರೆ ಅವುಗಳನ್ನು ತರಿಸಿಕೊಡುವ ಹೊಣೆ ಅಲ್ಲಿನ ಜಿಲ್ಲಾ ಸರ್ಜನ್ ಮತ್ತು ನಿರ್ದೇಶಕರದ್ದಾಗಿದೆ. ವೈದ್ಯರು ಒಂದು ವೇಳೆ ಪ್ರಿಸ್ಪೀಕ್ಷನ್ ಬರೆದು ಹೊರಗಡೆಯಿಂದ ಔಷಧಿ ತಗೊಂಡು ಬನ್ನಿ ಎಂದು ರೋಗಿಗಳಿಗೆ ತಿಳಿಸಿದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.

ಜನರಿಗೆ ಕಡಿಮೆ ಬೆಲೆಗಳಲ್ಲಿ ಔಷಧಿ ಸಿಗಬೇಕೆಂದು ಜನೌಷಧಿ ಕೇಂದ್ರಗಳು ತೆಗೆದಿರುವುದು ಒಳ್ಳೆಯದು, ಆದರೆ ರಾಜ್ಯ ಸರ್ಕಾರವೇ ರೋಗಿಗಳಿಗೆ ಉಚಿತ ಔಷಧಿ ಕೊಡುತ್ತಿರುವಾಗ ಆಸ್ಪತ್ರೆಯ ಆವರಣದಲ್ಲಿ ಮತ್ತೊಂದು ಔಷಧಿ ಕೇಂದ್ರಗಳು ಸ್ಥಾಪಿಸುವುದು ಯಾವ ಕಾರಣಕ್ಕೆ? ಎಂದು ಪ್ರಶ್ನಿಸಿದರು.

ಗರ್ಭಿಣಿಯರು ಮಾಸ್ಕ್ ಧರಿಸಬೇಕು :

ರಾಜ್ಯದಲ್ಲಿ ಕೋರೋನಾ ಲಕ್ಷಣಗಳು ಕೆಲವರಿಗೆ ಕಂಡುಬಂದಿರುವುದು ಗಮನಕ್ಕೆ ಬಂದಿದೆ, ಇದರ ಬಗ್ಗೆ ಸಭೆ ನಡೆಸಿ ನಾವು ಎಲ್ಲಾ ರೀತಿಯಲ್ಲಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಏನೆಲ್ಲಾ ಮಾಡಬೇಕೆನ್ನುವುದು ಆರೋಗ್ಯ ಇಲಾಖೆಯವರು ಮಾಡುತ್ತಿದ್ದಾರೆ, ಕೈಪಿಡಿಯು ಬಿಡುಗಡೆ ಮಾಡಿದ್ದು, ಗರ್ಭಿಣಿ ಇದ್ದವರಿಗೆ ಮಾಸ್ಕ್ ಧರಿಸುವುದು, ಜಾಸ್ತಿ ನೆಗಡಿ, ಕೆಮ್ಮು ಇದ್ದರೆ ಟೆಸ್ಟ್ ಮಾಡಿಕೊಂಡು ಚಿಕಿತ್ಸೆ ಪಡೆಯಬೇಕು ಎನ್ನುವುದನ್ನು ಸಲಹೆ ನೀಡಲಾಗಿದೆ.

-ಡಾ.ಶರಣಪ್ರಕಾಶ್ ಪಾಟೀಲ್ (ವೈದ್ಯಕೀಯ ಸಚಿವರು)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News