ಕಲಬುರಗಿ: ರಾಜ್ಯ ಸರ್ಕಾರ ಕಲಬುರಗಿ ಜಿಲ್ಲೆಗೆ ಘೋಷಿಸಿರುವ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ತಕ್ಷಣ ಅನುದಾನ ಬಿಡುಗಡೆ ಮಾಡಿ, ನಿಗದಿತ ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಕಲ್ಯಾಣ ನಾಡು ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಸ್ವಾಗತಿಸಿದರು. ಇದೇ ರೀತಿಯಲ್ಲಿ ಐಟಿ ಪಾರ್ಕ್, ಹಡಗಿಲ್‌ ಹಾರೂತಿ ಪ್ರದೇಶದಲ್ಲಿ ಸ್ಪೋರ್ಟ್ಸ್ ಸಿಟಿ, ಪಿಎಂ ಮಿತ್ರ ಜವಳಿ ಪಾರ್ಕ್, ಕಲ್ಯಾಣ ಕರ್ನಾಟಕ ಸಚಿವಾಲಯ ಹಾಗೂ ಕಲಬುರಗಿಯನ್ನು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಪಡಿಸುವ ಯೋಜನೆಗಳನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಬೀದರ್–ಕಲಬುರಗಿ–ಲಿಂಗಸುಗೂರು–ಬಳ್ಳಾರಿ ನಾಲ್ಕು ಪಥದ ಹೆದ್ದಾರಿ ನಿರ್ಮಾಣಕ್ಕೆ ಅನುದಾನ ನೀಡಿ ಕಾಮಗಾರಿ ಆರಂಭಿಸಬೇಕು. ಕಲಬುರಗಿ ಕೋಟೆ ಸೇರಿದಂತೆ ಜಿಲ್ಲೆಯ ಐತಿಹಾಸಿಕ ತಾಣಗಳನ್ನು ಅಭಿವೃದ್ಧಿಪಡಿಸಿ ರಾಷ್ಟ್ರಕೂಟ ಪ್ರವಾಸೋದ್ಯಮ ಸರ್ಕಿಟ್ ರೂಪಿಸಬೇಕು ಎಂದು ಅವರು ಆಗ್ರಹಿಸಿದರು.

ತೊಗರಿ ಬೆಳೆಯ ಮೌಲ್ಯವರ್ಧನೆಗೆ ಒತ್ತು ನೀಡುವುದರ ಜೊತೆಗೆ ತೊಗರಿ ಸಂಶೋಧನಾ ಸಂಸ್ಥೆ ಸ್ಥಾಪಿಸಬೇಕು. ಜಿಲ್ಲೆಯ ಆಣೆಕಟ್ಟುಗಳ ಕಾಲುವೆಗಳನ್ನು ದುರಸ್ತಿಗೊಳಿಸಿ ರೈತರ ಜಮೀನುಗಳಿಗೆ ನೀರು ತಲುಪಿಸುವ ವ್ಯವಸ್ಥೆ ಮಾಡಬೇಕು. ಕಲಬುರಗಿಯನ್ನು ರಾಜ್ಯದ ಎರಡನೇ ರಾಜಧಾನಿಯಾಗಿ ಘೋಷಿಸುವುದರ ಜೊತೆಗೆ ವಿಭಾಗ ಮಟ್ಟದ ಕಚೇರಿಗಳು, ಅಧಿವೇಶನ ಹಾಗೂ ಸಚಿವ ಸಂಪುಟ ಸಭೆಗಳಿಗೆ ಅನುಕೂಲವಾಗುವಂತೆ ‘ಕಲ್ಯಾಣ ಸೌಧ’ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲೆಗೆ ಘೋಷಿಸಿರುವ ಯೋಜನೆಗಳು ಕೇವಲ ಘೋಷಣೆಗೆ ಸೀಮಿತವಾಗದೆ, ತಕ್ಷಣ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಗಳನ್ನು ಆರಂಭಿಸಬೇಕು. ಸರ್ಕಾರ ಈ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ವಿಫಲವಾದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ವಿಷಯವನ್ನು ಜನತಾ ನ್ಯಾಯಾಲಯದ ಮುಂದೆ ಇಡಲಾಗುವುದು ಎಂದು ಅವರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಾಬು ಮದನಕರ, ಸಂಘಟಕರಾದ ಜೈಭೀಮ ಮಾಳಗೆ, ಅರುಣ ತಾವಡೆ, ಮೋಹನ ಸಾಗರ, ರಾಹುಲ ಶೃಂಗೇರಿ ಹಾಗೂ ಮಲ್ಲು ದೊರೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor