ಕಲಬುರಗಿ | ಅಂಬಿಗರ ಚೌಡಯ್ಯನವರಂತೆ ಸ್ವಾಭಿಮಾನ ಬೆಳೆಸಿಕೊಳ್ಳಿ : ಎಚ್.ಟಿ.ಪೋತೆ
ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯೋತ್ಸವ ಕಾರ್ಯಕ್ರಮ
ಕಲಬುರಗಿ: ನಿಜಶರಣ ಅಂಬಿಗರ ಚೌಡಯ್ಯನವರಂತೆ ಸ್ವಾಭಿಮಾನ ಬೆಳೆಸಿಕೊಂಡು ಎದೆಯಲ್ಲಿ ಡಾ.ಅಂಬೇಡ್ಕರ್ ಅವರ ಸಂವಿಧಾನ ಮುಂದಿಟ್ಟುಕೊಂಡು ಶಿಕ್ಷಣ ಪಡೆದುಕೊಳ್ಳಬೇಕು ಎಂದು ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ನಿರ್ದೇಶಕ ಎಚ್.ಟಿ.ಪೋತೆ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಹಾಗೂ ಕೋಲಿ ಸಮುದಾಯದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು.
12ನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯ ಅವರು ಕ್ರಾಂತಿಕಾರಿ ಸ್ವಾಭಿಮಾನಿಗಳಾಗಿದ್ದರು. ಅವರಂತೆಯೇ ಇಂದು ಶಿಕ್ಷಣ ಪಡೆದು ಅರಿವು ಪಡೆದುಕೊಳ್ಳಬೇಕಾಗಿದೆ. ಶಿಕ್ಷಣದಿಂದಲೇ ಸಮಾಜದ ಅಭಿವೃದ್ಧಿ, ಮೀಸಲಾತಿ ಹಕ್ಕು ಸಿಗಲಿವೆ ಎಂದು ಅಭಿಪ್ರಾಯಪಟ್ಟರು.
ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಅಂಬಿಗರ ಚೌಡಯ್ಯನವರ ಅಭಿವೃದ್ಧಿ ನಿಗಮ ಸ್ಥಾಪಿಸಿ, ಅದಕ್ಕೆ 300 ಕೋಟಿ ರೂ. ಅನುದಾನ ನೀಡುವಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಮಾತಾ ಮಣಿಕೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಮಾಡಲಾಗಿದೆ. ಇದಕ್ಕೆ ಸೂಕ್ತ ಅನುದಾನ ನೀಡಬೇಕು, ಕೋಲಿ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಲ್ಲಮಪ್ರಭು ಪಾಟೀಲ್, ಮುಖಂಡ ಬಸವರಾಜ ಬೂದಿಹಾಳ ಅವರು ಪ್ರಸ್ತಾವಿಕ ಮಾತನಾಡಿದರು. ಸುಲಫಲ ಮಠದ ಸಾರಂಗಧಾರ ದೇಶಿಕೇಂದ್ರದ ಮಹಾಸ್ವಾಮೀಜಿ, ಮಲ್ಲಣ್ಣಪ್ಪ ಮುತ್ಯಾ ತೋನಸನಳ್ಳಿ ಸಾನಿಧ್ಯ ವಹಿಸಿದರು.
ಕಾರ್ಯಕ್ರಮದಲ್ಲಿ ಬಿ.ಜಿ ಪಾಟೀಲ್, ಶಶೀಲ್ ನಮೋಶಿ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್, ಕುಡಾ ಅಧ್ಯಕ್ಷ ಮಝಹರ್ ಖಾನ್ ಆಲಂ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ, ಮೋಹನಕುಮಾರ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಾಯಿಬಣ್ಣ ನೀಲಪ್ಪಗೊಳ, ರವಿರಾಜ್ ಕೊರವಿ, ರಮೇಶ್ ನಾಟಿಕಾರ್, ಶಿವಾನಂದ ಹೊನಗುಂಟಿ, ಅಶೋಕ ವೀರನಾಯಕ, ಲಚ್ಚಪ್ಪ ಜಮಾದಾರ್, ಅಂಬು ಡಿಗ್ಗಿ, ಬಸವರಾಜ ಗುಂಡಲಗೇರಿ, ಶ್ಯಾಮರಾವ್ ಸುಲ್ತಾನಪುರ, ಶಾಂತಪ್ಪ ಕೂಡಿ, ವಿಜಯಕುಮಾರ್ ಹದಗಲ್, ಶಿವಶರಣಪ್ಪ ಕೋಬಾಳ, ಅನುಪಮಾ ಕಮಕನೂರು, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಅವ್ವಣ್ಣ ಮ್ಯಾಕೇರಿ, ವಾಣಿ ಸಗರಕರ, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಜಯಪ್ರಕಾಶ ಕಮಕನೂರ ಸೇರಿದಂತೆ ಹಲವರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಅವರು ಸ್ವಾಗತಿಸಿದರು. ಶಿವಾನಂದ ಅಣಜಗಿ ನಿರೂಪಿಸಿದರು.
ಈ ವೇಳೆ ಪ್ರತಿಭಾವಂತ ಮಕ್ಕಳಿಗೆ ಲ್ಯಾಪ್ ಟಾಪ್, ಅಂಗವಿಕಲ ಮಕ್ಕಳಿಗೆ ತ್ರಿಚಕ್ರ ಸೈಕಲ್ ವಿತರಿಸಲಾಯಿತು. ಬಸವರಾಜ್ ಬಳ್ಳಾರಿ ಭಾರತ ನಾಟ್ಯ ಪ್ರದರ್ಶಿಸಿ ಗಮನ ಸೆಳೆದರು. ಬಸವರಾಜ ಶೃಂಗೇರಿ ಹಾಗೂ ಅವರ ತಂಡದಿಂದ ನಾಡಗೀತೆ ಪ್ರಸ್ತುತ ಪಡಿಸಲಾಯಿತು.
ವಿವಿಧ ವಾಧ್ಯ, ಗೊಂಬೆಗಳ ಪ್ರದರ್ಶನ, ನಾಸಿಕ ಡೋಲ್, ಜನಪದ ಕಲಾ ತಂಡಗಳು, ಹುಲಿ ಕುಣಿತ ಸೇರಿದಂತೆ ವಿವಿಧ ವೇಷಧಾರಿಗಳ ಮೂಲಕ ನಡೆಯುವ ಮೆರವಣಿಗೆಯು ಡಾ.ಎಸ್.ಎಂ.ಪಂಡಿತ್ ರಂಗಮಂದಿರಕ್ಕೆ ತಲುಪಿದವು.
ಇದಕ್ಕೂ ಮುನ್ನ ವಚನ ಗ್ರಂಥ ಹಾಗೂ ಅಂಬಿಗರ ಚೌಡಯ್ಯನವರ ಮೂರ್ತಿಗೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಯಿತು. ಪಾಲಿಕೆಯ ಆವರಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.