ಜೇವರ್ಗಿ | ಪೌರಕಾರ್ಮಿಕರ ದಿನಾಚರಣೆ ಹಬ್ಬವಾಗಬೇಕು: ಶಂಭುಲಿಂಗ ದೇಸಾಯಿ
ಕಲಬುರಗಿ: ವರ್ಷದ 365 ದಿನಗಳೂ ಶ್ರಮಪಟ್ಟು ದುಡಿಯುವ ಕಾಯಕಯೋಗಿಗಳು ನಮ್ಮ ಪೌರ ಕಾರ್ಮಿಕರು. ಅವರು ಪಟ್ಟಣ-ಗ್ರಾಮಗಳನ್ನು ಸ್ವಚ್ಛವಾಗಿ ಇಡುವ ನಿಸ್ವಾರ್ಥ ಸೇವಕರು. ಪೌರ ಕಾರ್ಮಿಕರ ದಿನಾಚರಣೆಯನ್ನು ಒಂದು ದೊಡ್ಡ ಹಬ್ಬದಂತೆ ಆಚರಿಸಬೇಕು ಎಂದು ಜೇವರ್ಗಿ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಹೇಳಿದರು.
ಜೇವರ್ಗಿ ಪಟ್ಟಣದ ಪುರಸಭೆ ಆವರಣದಲ್ಲಿ, ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘ ಜೇವರ್ಗಿ ಮತ್ತು ಪುರಸಭೆ ಕಚೇರಿ ಜೇವರ್ಗಿ ಅವರ ಸಂಯುಕ್ತ ಆಶ್ರಯದಲ್ಲಿ ಪೌರ ಕಾರ್ಮಿಕರ ದಿನಾಚರಣೆ ನಡೆಯಿತು.
ಈ ವೇಳೆ ದೇಸಾಯಿ ಮಾತನಾಡಿ, ಬಸವಣ್ಣರು ಹೇಳಿದಂತೆ ಕಾಯಕದಲ್ಲಿ ಕೈಲಾಸವನ್ನು ಕಾಣುವವರು ನಮ್ಮ ಪೌರ ಕಾರ್ಮಿಕರು. ಅವರಿಗೆ ಬಿಡುವಿಲ್ಲದೆ ಪ್ರತಿದಿನ ಕಾಯಕದಲ್ಲಿ ನಿರತರಾಗಿರುತ್ತಾರೆ. ಪೌರ ಕಾರ್ಮಿಕರಿಲ್ಲದ ಗ್ರಾಮವನ್ನು ಊಹಿಸಲು ಸಾಧ್ಯವಿಲ್ಲ. ಅವರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು, ಜನರೂ ಅವರನ್ನು ಗೌರವಿಸಬೇಕು. ಜೊತೆಗೆ ಅವರು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಮಲ್ಲಣ್ಣ ಯಲಗೋಡ, ದಾನಪ್ಪಗೌಡ ಹಳಿಮನಿ, ಸಿರಾಜುದ್ದಿನ್ ಬಡಾಗರ್, ಲಕ್ಷ್ಮಣ ದೊಡ್ಮನಿ, ಶಿವಮ್ಮ ನಂದಿ, ರಾಜಶೇಖರ್ ಅವರಾದ, ನಿಂಗಪ್ಪ ಪೂಜಾರಿ ಸೇರಿದಂತೆ ಪುರಸಭೆ ಸದಸ್ಯರು, ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಉಪಸ್ಥಿತರಿದ್ದರು.