ಕಲಬುರಗಿ | ಅಪ್ರಾಪ್ತೆಯನ್ನು ವಿವಾಹವಾಗಿದ್ದ ವ್ಯಕ್ತಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
ಪೋಷಕರಿಗೂ 1 ವರ್ಷ ಜೈಲು
ಸಾಂದರ್ಭಿಕ ಚಿತ್ರ
ಕಲಬುರಗಿ: 17 ವರ್ಷದ ಅಪ್ರಾಪ್ತೆಯನ್ನು ವಿವಾಹವಾದ ವ್ಯಕ್ತಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ಪೋಕ್ಸೋ) ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಒಟ್ಟು 15 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯ ಗುಳೊಳ್ಳಿ ತಾಂಡಾ ನಿವಾಸಿ ನಿತಿನ್ ನೀಲು ಪವಾರ (25) ಶಿಕ್ಷೆಗೆ ಒಳಗಾದ ಆರೋಪಿ. ಈತನಿಗೆ ಪೋಕ್ಸೋ ಕಾಯ್ದೆಯಡಿ 20 ವರ್ಷ ಸಜೆ ಮತ್ತು 10 ಸಾವಿರ ರೂ. ದಂಡ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಒಂದು ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಲಾಗಿದೆ.
ಈ ಬಾಲ್ಯವಿವಾಹಕ್ಕೆ ಸಾಕ್ಷಿಯಾದ ಮತ್ತು ಪ್ರೋತ್ಸಾಹ ನೀಡಿದ ಆರೋಪಿಯ ಪೋಷಕರಾದ ನೀಲು ಪವಾರ (ತಂದೆ) ಮತ್ತು ತಾಯಿ, ಹಾಗೂ ಬಾಲಕಿಯ ತಂದೆ-ತಾಯಿಗೂ ನ್ಯಾಯಾಲಯವು ತಲಾ ಒಂದು ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ. ನ್ಯಾಯಾಧೀಶರಾದ ಮುಹಮ್ಮದ್ ಮುಜೀರ್ ಉಲ್ಲಾ ಸಿ.ಜಿ. ಅವರು ಈ ತೀರ್ಪು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ :
2023ರ ಮೇ 17ರಂದು ಆಳಂದದ ಕಲ್ಯಾಣ ಮಂಟಪವೊಂದರಲ್ಲಿ ನಿತಿನ್ ಹಾಗೂ 17 ವರ್ಷದ ಬಾಲಕಿಯ ವಿವಾಹ ನಡೆದಿತ್ತು. ಮದುವೆಯಾದ ಕೆಲವೇ ತಿಂಗಳಲ್ಲಿ ಬಾಲಕಿ ಗರ್ಭಿಣಿಯಾಗಿದ್ದಳು. ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ವೈದ್ಯಕೀಯ ತಪಾಸಣೆಯಿಂದ ಇದು ಬಾಲ್ಯವಿವಾಹ ಎಂಬ ವಿಷಯ ಬೆಳಕಿಗೆ ಬಂದಿತ್ತು.
ಆಳಂದ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಶರಣಬಸಪ್ಪ ಕೋಡ್ಲಾ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ (ಪೋಕ್ಸೋ) ಶಾಂತವೀರ ತುಪ್ಪದ ಅವರು ವಾದ ಮಂಡಿಸಿದ್ದರು.