ಕಲಬುರಗಿ | ಮಧ್ಯಂತರ ಬೆಳೆ ವಿಮೆ ಹಣ ನೀಡುವಂತೆ ಡಾ.ಲಿಂಗರಾಜ ಸಿರಗಾಪೂರ ಆಗ್ರಹ
ಕಲಬುರಗಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ತೊಗರಿ ಬೆಳೆಗೆ ಭೀಕರ 'ನೆಟೆ ರೋಗ' ಆವರಿಸಿದ್ದು, ರೈತರು ಭಾರಿ ಪ್ರಮಾಣದ ನಷ್ಟ ಅನುಭವಿಸುತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ಕೂಡಲೇ ಮಧ್ಯಂತರ ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅತಿವೃಷ್ಟಿಯಿಂದಾಗಿ ಮುಂಗಾರು ಬೆಳೆಗಳು ರೈತರ ಕೈಗೆ ಸಿಗದಂತಾಗಿವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಮಾ ಕಂಪನಿಗಳಿಗೆ ಕೂಡಲೇ ಮಧ್ಯಂತರ ಬೆಳೆ ವಿಮೆ ಹಣ ಬಿಡುಗಡೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಇದರೊಂದಿಗೆ ರಾಜ್ಯ ಸರ್ಕಾರವು ಎಕರೆಗೆ 25 ಸಾವಿರ ರೂಪಾಯಿ ಹೆಚ್ಚುವರಿ ಪರಿಹಾರ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿಯು ನೆಟೆ ರೋಗದಿಂದಾಗಿ ಒಣಗಲಾರಂಭಿಸಿದೆ. ಇದರಿಂದಾಗಿ ಇಳುವರಿ ಕುಂಠಿತವಾಗಿದ್ದು, ರೈತರು ಹೈರಾಣಾಗಿದ್ದಾರೆ. ಬಿತ್ತನೆ ಬೀಜ, ಗೊಬ್ಬರ ಹಾಗೂ ಕೂಲಿಗಾಗಿ ರೈತರು ಪ್ರತಿ ಎಕರೆಗೆ ಸುಮಾರು 20 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಈಗ ಖರ್ಚು ಮಾಡಿದ ಹಣವೂ ವಾಪಸ್ ಬರದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿಷಾದಿಸಿದರು.
ರೈತರು ವಿಮಾ ಕಂತು ಪಾವತಿಸಿ 8 ತಿಂಗಳು ಕಳೆದರೂ ವಿಮಾ ಕಂಪನಿಗಳು ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿವೆ. ಮಧ್ಯಂತರ ವಿಮೆ ಹಣ ಬಿಡುಗಡೆ ಮಾಡಿಸುವುದಾಗಿ ಈ ಹಿಂದೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು. ಭರವಸೆ ಈಡೇರಿಸದ ಮತ್ತು ರೈತರಿಗೆ ತೊಂದರೆ ನೀಡುತ್ತಿರುವ ವಿಮಾ ಕಂಪನಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಡಾ. ಸಿರಗಾಪೂರ ಒತ್ತಡ ಹೇರಿದ್ದಾರೆ.