ಕಲಬುರಗಿ | ವಿದ್ಯುತ್ ತಂತಿ ತಗುಲಿ ಆಸ್ಪತ್ರೆಯ ಸಿಬ್ಬಂದಿ ಮೃತ್ಯು
Update: 2024-10-10 16:54 IST
ಶಿವಪುತ್ರ (30)
ಕಲಬುರಗಿ : ಆಸ್ಪತ್ರೆ ಮೇಲ್ಛಾವಣಿಯ ಟ್ಯಾಂಕ್‌ಗೆ ನೀರು ತುಂಬಲು ಹೋಗಿ ವಿದ್ಯುತ್ ತಂತಿ ತಗುಲಿ ಆಸ್ಪತ್ರೆಯ (ಡಿ) ಗ್ರೂಪ್ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ಅಫಜಲಪುರ ತಾಲ್ಲೂಕಿನ ಕರಜಗಿ ಸರಕಾರಿ ಆಸ್ಪತ್ರೆಯಲ್ಲಿ ಗುರುವಾರ ಸಂಭವಿಸಿದೆ.
ಮೃತ ಸಿಬ್ಬಂದಿಯನ್ನು ಇಲ್ಲಿನ ಮಾಶಾಳ ಗ್ರಾಮದ ನಿವಾಸಿ ಶಿವಪುತ್ರ (30) ಎಂದು ಗುರುತಿಸಲಾಗಿದೆ. ಶಿವಪುತ್ರ ಎಂದಿನಂತೆ ಆಸ್ಪತ್ರೆಯ ಮೇಲ್ಛಾವಣಿಯಲ್ಲಿರುವ ಟ್ಯಾಂಕ್‌ಗೆ ನೀರು ತುಂಬಲು ಹೋಗಿದ್ದಾಗ ಪಕ್ಕದಲ್ಲಿರುವ ವಿದ್ಯುತ್ ತಂತಿಗೆ ನೀರಿನ ಪೈಪ್ ತಗುಲಿದೆ ಎನ್ನಲಾಗಿದೆ. ಇದರಿಂದ ಶಿವಪುತ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.