ಕಲಬುರಗಿ | ಕಅಬಾ ಮೇಲೆ ಭಗವಾಧ್ವಜ ಹಿಡಿದಿರುವ ಮೋದಿ, ಆದಿತ್ಯನಾಥ್ ಫೋಟೋ ಎಡಿಟ್ ಮಾಡಿ ವಿಕೃತಿ : ಮತ್ತೋರ್ವ ಯುವಕನ ಬಂಧನ
ಯಲ್ಲಪ್ಪ
ಕಲಬುರಗಿ: ಇಸ್ಲಾಂ ಧರ್ಮದ ಪವಿತ್ರ ಸ್ಥಳವಾಗಿರುವ ಮಕ್ಕಾದ ಕಅಬಾದ ಮೇಲೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಹಾಗೂ ಭಗವಾಧ್ವಜವನ್ನು ಎಡಿಟ್ ಮಾಡಿದ ಫೊಟೋವೊಂದನ್ನು ವೈರಲ್ ಮಾಡಿರುವುದಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಹೊರವಲಯದ ಕುಸನೂರ ನಿವಾಸಿ ಯಲ್ಲಪ್ಪ ಸಾಯಿಬಣ್ಣ ತಳವಾರ(24) ಬಂಧಿತ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ.
ಯುವಕ ಯಲ್ಲಪ್ಪ ವಿರುದ್ಧ ಸೋಮವಾರ ರಾತ್ರಿ ನಗರದ ರಾಘವೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯುವಕನ ಪತ್ತೆಗೆ ಜಾಲ ಬೀಸಿದ ಪೊಲೀಸರು, ಕೇವಲ 24 ಗಂಟೆಗಳ ಒಳಗಾಗಿ ಆತನನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯುವಕ ಯಲ್ಲಪ್ಪ, ʼಯಲ್ಲಪ್ಪ413ʼ ಎಂಬ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಅಬಾದ ಮೇಲೆ ಭಗವಾಧ್ವಜ ಹಿಡಿದಿರುವ ನರೇಂದ್ರ ಮೋದಿ, ಆದಿತ್ಯನಾಥ್ ಫೋಟೋವನ್ನು ಎಡಿಟ್ ಮಾಡಿ ವಿಕೃತಿ ಮೆರೆದಿದ್ದಾನೆ. ಇದನ್ನು ಗಮನಿಸಿದ ಹುಸೈನಿ ಗಾರ್ಡನ್ ಬಡಾವಣೆಯ ನಿವಾಸಿ ಮುಹಮ್ಮದ್ ಯಾಸೀನ್, ಸೈಯದ್ ಜಾಫರ್, ಅಬ್ದುಲ್ ರಹಮಾನ್, ಸದಾಮ್ ಅಖಾಡಾ ಹಾಗೂ ಇಮ್ರಾನ್ ರಜವಿ ಠಾಣೆಗೆ ದೂರು ನೀಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಸಗಿರುವ ಆರೋಪಿಯನ್ನು ಬಂಧಿಸಿ, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ, ಯುವಕನ ಹಿಂದೆ ಇರುವ ಶಕ್ತಿಗಳನ್ನು ಪತ್ತೆ ಹಚ್ಚಬೇಕೆಂದು ಅವರು ಆಗ್ರಹಿಸಿದ್ದರು.
ಈ ಕುರಿತು ನೀಡಿದ ದೂರಿನ ಮೇರೆಗೆ ರಾಘವೇಂದ್ರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.
ಈ ಹಿಂದೆ ಅಕ್ಟೋಬರ್ 4 ರಂದು ಜೇವರ್ಗಿ ಪೊಲೀಸ್ ಠಾಣೆ ವ್ಯಾಪ್ತಿಯ ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮದ ಆನಂದ ಗುತ್ತೇದಾರ್ (22) ಇದೇ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದಕ್ಕೆ ಬಂಧಿಸಲಾಗಿತ್ತು. ಇದೀಗ ಇಂತಹದ್ದೇ ಪ್ರಕರಣದಲ್ಲಿ ಮತ್ತೋರ್ವ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.